ತೆನೆ ಇಳಿಸಿ ಕೈ ಮಿಲಾಯಿಸಿದ ಜೆಡಿಎಸ್ ನಾಯಕರು; ಕೆಪಿಸಿಸಿ ಕಚೇರಿಯಲ್ಲಿ ಸಿಎಂ, ಡಿಸಿಎಂ ಸುದ್ದಿಗೋಷ್ಠಿ
ಒಂದ್ಕಡೆ ದಳ-ಕಮಲ ದೋಸ್ತಿಗೆ ಒಳಗೊಳಗೆ ವಿರೋಧ ವ್ಯಕ್ತವಾಗ್ತಿದ್ರೆ ಇದೀಗ ಜೆಡಿಎಸ್ಗೆ ಹೊಸ ಶಾಕ್ ಎದುರಾಗಿದೆ. ಇಂದು ಜೆಡಿಎಸ್ ನಾಯಕರು ತೆನೆ ಇಳಿಸಿ ಕೈ ಹಿಡಿಯಲು ಮುಂದಾಗಿದ್ದಾರೆ. ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಅಪ್ಪಾಜಿಗೌಡ ಇಂದು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಸಿಎಂ ಹಾಗೂ ಡಿಸಿಎಂ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಬೆಂಗಳೂರು, ಮಾರ್ಚ್.22: ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದ್ದು ಜೆಡಿಎಸ್‌ನ (JDS) ಮೂವರು ನಾಯಕರು ಕೈ ಬಾವುಟ ಹಾರಿಸಿದ್ದಾರೆ. ಕಾರ್ಯಕ್ರಮದ ನಂತರ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮಂಡ್ಯದ ಮಾಜಿ ಶಾಸಕ ಎಂ. ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ನಾಗಮಂಗಲದ ಅಪ್ಪಾಜಿ ಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿರುವ ಮರಿತಿಬ್ಬೇಗೌಡ ಅವರು ಇಂದು ಕಾಂಗ್ರೆಸ್ಗೆ ಸೇರಿದ್ದಾರೆ. ಜೊತೆಗೆ ಆರ್.ಆರ್. ನಗರ ಎಚ್ಎಂಟಿ ವಾರ್ಡ್ ಮಾಜಿ ಕಾರ್ಪೊರೇಟರ್ ಆಶಾ ಸುರೇಶ್ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಬಿಕೆ ಹರಿಪ್ರಸಾದ್, ಸಲೀಂ ಅಹಮದ್, ಸಚಿವ ಚಲುವರಾಯಸ್ವಾಮಿ, ರವಿ ಗಾಣಿಗ, ಉದಯ್ ಗೌಡ ಭಾಗಿಯಾಗಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮರಿತಿಬ್ಬೇಗೌಡ ಅತಿ ಹೆಚ್ಚು ಕ್ರಿಯಾಶೀಲ ನಾಯಕ. ಪದವೀಧರರು, ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದ ಹೋರಾಟಗಾರ ವಾಗ್ಮಿ. ಬಹಳ ದಿನದಿಂದ ಗಾಳ ಹಾಕ್ತಿದ್ದೆ ಅವರು ಸಿಕ್ಕಿರಲಿಲ್ಲ. ಕೌನ್ಸಿಲ್ ಸಭಾಪತಿಗೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಜೆಡಿಎಸ್‌ನ ದೊಡ್ಡ ಪಿಲ್ಲರ್ ಆಗಿದ್ದವರು ಅವರು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು ಎಂದು ಪರಿಚಯಿಸಿದರು.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ