ದಾವಣಗೆರೆಯ ಮಾಯಾಕೊಂಡದಲ್ಲೂ ಜಂಬೂ ಸವಾರಿ ನಡೆಯುತ್ತದೆ, ಆದರೆ ಇದು ಮೈಸೂರಿನದಕ್ಕಿಂತ ಭಿನ್ನ!

ದಾವಣಗೆರೆಯ ಮಾಯಾಕೊಂಡದಲ್ಲೂ ಜಂಬೂ ಸವಾರಿ ನಡೆಯುತ್ತದೆ, ಆದರೆ ಇದು ಮೈಸೂರಿನದಕ್ಕಿಂತ ಭಿನ್ನ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2021 | 4:23 PM

ಮಾಯಾಕೊಂಡನಲ್ಲಿ ಗರಡಿ ಮನೆಗಳಿವೆ. ಅಲ್ಲಿ ಕಸರತ್ತು ಮಾಡುವ, ತರಬೇತಿ ಹೊಂದುವ ಪೈಲ್ವಾನರು ಕೃತಕ ಆನೆಗಳನ್ನು ತಯಾರಿಸುತ್ತಾರೆ. ಇದು ಶತಮಾನಗಳಿಂದ ನಡೆದುಕೊಂಡಿರುವ ಪದ್ಧತಿಯಂತೆ.

ನಮ್ಮ ನಾಡಿನಲ್ಲಿ ದಸರಾ ಹಬ್ಬವನ್ನು ಆಚರಿಸುವ ವಿಧಾನಗಳು ಒಂದೆರಡಲ್ಲ. ಒಂದೊಂದು ಭಾಗದಲ್ಲಿ ಆ ಭಾಗದ ವೈಶಿಷ್ಟ್ಯತೆಯೊಂದಿಗೆ ಆಚರಿಸಲಾಗುತ್ತದೆ. ಹಾಗೆ ನೋಡಿದರೆ, ಮೈಸೂರಿನಲ್ಲಿ ನಡೆಯುವ ದಸರಾ ಇಡೀ ನಾಡಿಗೆ ಮಾದರಿ. ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಂತೆ ಜಂಬೂ ಸವಾರಿ ಬೇರೆ ಪ್ರದೇಶಗಳಲ್ಲಿ ನಡಯುವುದಿಲ್ಲವಾದರೂ, ಕೆಲವೆಡೆ ಅಣುಕು ಸವಾರಿಗಳನ್ನು ಏರ್ಪಪಡಿಸಲಾಗುತ್ತದೆ. ಇಲ್ಲಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಇದು ಕರ್ನಾಟಕದ ವಾಣಿಜ್ಯ ನಗರ ದಾವಣಗೆರೆಯ ಮಾಯಾಕೊಂಡನಲ್ಲಿ ನಡೆದ ದಸರಾ ಉತ್ಸವದ ವಿಡಿಯೋ. ಅರೆ, ಮತ್ತೇ ಇಲ್ಲೂ ಆನೆಗಳಿವೆಯಲ್ಲ ಮಾರಾಯ್ರೇ ಅಂತ ಅಂದ್ಕೋಬೇಡಿ.

ಅಸಲಿಗೆ ಅವು ಆನೆಗಳಲ್ಲ, ಆನೆಗಳ ಪ್ರತಿಕೃತಿಗಳು-ಅಂದರೆ ಕೃತಕ ಆನೆಗಳು. ದಸರಾ ಹಬ್ಬದ ಉತ್ಸವ ಆಚರಿಸುವಾಗ, ಮಾಯಾಕೊಂಡನಲ್ಲಿ ಕೃತಕ ಅನೆಗಳನ್ನು ತಯಾರಿಸಲಾಗುತ್ತದೆ. ಆ ಆನೆಗಳ ಬೆನ್ನಮೇಲೆ, ಅಂಬಾರಿಯನ್ನಿಟ್ಟು ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದಹಾಗೆ, ಕೃತಕ ಆನೆಗಳನ್ನು ಶಿಲ್ಪಿಗಳೋ, ಅಥವಾ ಇಂಥ ಕೆಲಸಗಳಲ್ಲಿ ನಿಪುಣರಾಗಿರುವವರೋ ತಯಾರಿಸುವುದಿಲ್ಲ ಅಂತ ಹೇಳಿದರೆ ನಿಮಗೆ ಆಶ್ಚರ್ಯವಾಗದಿರದು.

ಮಾಯಾಕೊಂಡನಲ್ಲಿ ಗರಡಿ ಮನೆಗಳಿವೆ. ಅಲ್ಲಿ ಕಸರತ್ತು ಮಾಡುವ, ತರಬೇತಿ ಹೊಂದುವ ಪೈಲ್ವಾನರು ಕೃತಕ ಆನೆಗಳನ್ನು ತಯಾರಿಸುತ್ತಾರೆ. ಇದು ಶತಮಾನಗಳಿಂದ ನಡೆದುಕೊಂಡಿರುವ ಪದ್ಧತಿಯಂತೆ.

ಅವರಿಂದ ತಯಾರಾದ ಆನೆಯನ್ನು ಎತ್ತಿನ ಗಾಡಿ ಹೂಡಿ ಅದರಲ್ಲಿ ಇಡಲಾಗುತ್ತದೆ. ಆಮೇಲೆ ಅದರ ಮೇಲೆ ಅಂಬಾರಿಯನ್ನಿಟ್ಟು ಅದರೊಳಗೆ ದುರ್ಗೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಊರ ಜನರೆಲ್ಲ ವಿಡಿಯೋನಲ್ಲಿ ಕಾಣುತ್ತಿರುವ ಸರ್ಕಲ್ನಲ್ಲಿ ಜಮಾಗೊಂಡ ನಂತರ ಕೃತಕ ಆನೆಗಳ ಸವಾರಿ ನಡೆಯುತ್ತದೆ.

ಎತ್ತಿನ ಬಂಡಿ ಸರ್ಕಲ್ ಸುತ್ತಲಾರಂಭಿಸಿದ ನಂತರ ಜನರ ಹರ್ಷೋದ್ಗಾರಗಳು ಮುಗಿಲು ಮುಟ್ಟುತ್ತವೆ. ಕೆಲವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರೆ ಬೇರೆ ಜನ ಆವೇಷಕ್ಕೊಳಗಾದವರಂತೆ ಕುಣಿಯಲಾರಂಭಿಸುತ್ತಾರೆ.

ಮಾಯಾಕೊಂಡದ ಜನ ದಸರಾ ಹಬ್ಬ ಆಚರಿಸುವ ರೀತಿ ಭಿನ್ನವಾಗಿದೆ ಮತ್ತು ವಿಶಿಷ್ಟವೂ ಆಗಿದೆ.

ಇದನ್ನೂ ಓದಿ:   Uttarakhand Rain: ಮಳೆಯಿಂದ ಬಂಡೆಗಳ ಮಧ್ಯೆ ಸಿಲುಕಿದ ಕಾರಲ್ಲಿದ್ದವರ ರಕ್ಷಣೆ; ಶಾಕಿಂಗ್ ವಿಡಿಯೋ ಇಲ್ಲಿದೆ