Karnataka Politics: ಒಕ್ಕಲಿಗ ಸಮುದಾಯಕ್ಕೆ 6 ಕೋಟಿ ಮೌಲ್ಯದ ಜಮೀನು ಗಿಫ್ಟ್ ಮಾಡಿದ ಶಾಸಕ ಶರತ್ ಬಚ್ಚೇಗೌಡ
ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶರತ್ ಹೇಳಿದ್ದರು. ಇದೀಗ ಹೇಳಿದ್ದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಜಮೀನು ಗಿಫ್ಟ್ ಮಾಡಿದ್ದಾರೆ.
ದೇವನಹಳ್ಳಿ: ಚುನಾವಣೆಯಲ್ಲಿ ಸಮುದಾಯವನ್ನ ಸೆಳೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮತ ಸೆಳೆಯಲು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು 6 ಕೋಟಿ ಮೌಲ್ಯದ ಜಮೀನು ಗಿಫ್ಟ್ ಮಾಡಿದ್ದಾರೆ. ಹೊಸಕೋಟೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ್ದಾರೆ.
ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತಿ ಹೆಚ್ಚು ಮತಗಳ ಸಮುದಾಯ ಒಕ್ಕಲಿಗ ಸಮುದಾಯ. 45 ಸಾವಿರ ಮತಗಳನ್ನ ಹೊಂದಿದೆ. ಹೀಗಾಗಿ ಮತಗಳನ್ನ ಗಟ್ಟಿ ಮಾಡಿಕೊಳ್ಳಲು ಜಮೀನು ಗಿಫ್ಟ್ ಮಾಡಿದ್ದಾರೆ. ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶರತ್ ಹೇಳಿದ್ದರು. ಇದೀಗ ಹೇಳಿದ್ದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಜಮೀನು ಗಿಫ್ಟ್ ಮಾಡಿದ್ದಾರೆ. ಹೊಸಕೋಟೆ ತಾಲೂಕು ಕಚೇರಿಯಲ್ಲಿ ಸಂಘದ ಹೆಸರಿಗೆ ಜಮೀನು ಮಾಡಿಕೊಟ್ಟಿದ್ದಾರೆ. ಕೊಟ್ಟ ಜಮೀನಿನಲ್ಲಿ ಶಾಲಾ ಕಾಲೇಜು ಕಟ್ಟಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ.
ಹೊಸಕೋಟೆಯಲ್ಲಿ ಚುನಾವಣೆ ಘೋಷಣೆಗೂ ಮುನ್ನವೆ ಗಿಪ್ಟ್ ಪಾಲಿಟಿಕ್ಸ್
ಸಿಲಿಕಾನ್ ಸಿಟಿಗೆ ಹೆಬ್ಬಾಗಿಲಿನಂತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮತ್ತೆ ರಾಜಕೀಯ ಕಾವು ಹೆಚ್ಚಾಗಿದೆ. ಪರಸ್ಪರ ಹೊಡೆದಾಡ ಬಡಿದಾಡ ಸವಾಲ್ಗಳಿಂದಲೆ ಕಚ್ಚಾಡುತ್ತಿದ್ದ ಶಾಸಕ ಶರತ್ ಬಚ್ಚೇಗೌಡ ಮತ್ತು ಸಚಿವ ಎಂಟಿಬಿ ನಾಗರಾಜ್ ಇದೀಗ ಕೋಟಿಗಟ್ಟಲೆ ಹಣದ ಮಳೆಯನ್ನೆ ಸುರಿಯುತ್ತಿದ್ದಾರೆ. ಹೌದು ಹೊಸಕೋಟೆ ತಾಲೂಕಿನಲ್ಲಿ 45 ಸಾವಿರಕ್ಕೂ ಅಧಿಕ ಮತದಾರರನ್ನ ಹೊಂದಿರುವ ತಮ್ಮದೆ ಸಮುದಾಯವಾಗಿರುವು ವಕ್ಕಲಿಗರ ಸಮುದಾಯಕ್ಕೆ ಇದೀಗ ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆಯಿಂದ ಕೂಗಳತೆ ದೂರದಲ್ಲೆ 3 ಎಕರೆ 10 ಗುಂಟೆ ಜಮೀನನ್ನ ದಾನವಾಗಿ ನೀಡಿದ್ದಾರೆ. ಹೊಸಕೋಟೆ ತಾಲೂಕು ವಕ್ಕಲಿಗರ ಸಂಘಕ್ಕೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಅಲ್ಲಿ ಶಾಲಾ ಕಾಲೇಜು ನಿರ್ಮಾಣವಾಗಲಿ ಅಂತ 3 ಎಕರೆ ಜಮೀನನ್ನ ತನ್ನ ಹೆಸರಿನಿಂದ ವಕ್ಕಲಿಗರ ಸಂಘದ ಹೆಸರಿಗೆ ಮಾಡಿಕೊಡುವ ಮೂಲಕ ಕ್ಷೇತ್ರದ 45 ಸಾವಿರ ವಕ್ಕಲಿಗರ ಮತಗಳನ್ನ ಗಟ್ಟಿ ಮಾಡಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಎಲ್ಲರಿಗೂ ಅನುಕೂಲವಾಗಲಿ ಅಂತ ಜಮೀನು ಕೊಡುವುದಾಗಿ ಕೆಂಪೇಗೌಡ ಜಯಂತಿ ವೇಳೆ ಹೇಳಿದ್ದೆ ಹೀಗಾಗಿ ಇಂದು ಹೇಳಿದಂತೆ ಜಮೀನು ಕೊಟ್ಟಿದ್ದೇನೆ ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ ಅಂದಿದ್ದಾರೆ.
ವಕ್ಕಲಿಗರ ಮತಗಳನ್ನ ಸೆಳೆಯಲು ಶಾಸಕ ಶರತ್ ಕೋಟಿಗಟ್ಟಲೆ ಭೂಮಿಯನ್ನ ದಾನ ಮಾಡಿದ್ರೆ ಇತ್ತ ಸಚಿವ ಎಂಟಿಬಿ ನಾಗರಾಜ್ ಸಹ ಬೈ ಎಲೆಕ್ಷನ್ ನಲ್ಲಿ ನಡೆದ ಸೋಲಿನ ಕಹಿಯನ್ನ ಮರೆತು ಮಗನನ್ನ ಶಾಸಕನಾಗಿ ಮಾಡಲು ಪಣತೊಟ್ಟಿದ್ದಾರೆ. ಹೀಗಾಗೆ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುತ್ತಾ ಹೋದ ಕಡೆಯಲೆಲ್ಲ ಸೀರೆ ಬೆಡ್ ಶೀಟ್ಗಳನ್ನ ಜನರಿಗೆ ಗಿಪ್ಡ್ ಆಗಿ ನೀಡ್ತಿದ್ದಾರೆ. ಜತೆಗೆ ಮುಸ್ಲಿಂ ಸಮುದಾಯವನ್ನ ತನ್ನತ್ತ ಸೆಳೆಯಲು ಕಳೆದ ತಿಂಗಳಷ್ಟೆ ಲಕ್ಷ ಲಕ್ಷ ಖರ್ಚು ಮಾಡಿ ಕವ್ವಾಲಿ ಕಾರ್ಯಕ್ರಮ ನಡೆಸಿದ್ದ ಎಂಟಿಬಿ ನಾಗರಾಜ್ ಅಂದಿನ ಕಾರ್ಯಕ್ರಮದಲ್ಲಿ ಹಣದ ಮಳೆಯನ್ನೆ ಹರಿಸಿದ್ರು. ಇದೀಗ ಮತ್ತೆ ನಗರದ ಜನರ ಮತಗಳನ್ನ ಸೆಳೆಯಲು ಶಿವರಾತ್ರಿಗೆ ಲಕ್ಷ ಲಕ್ಷ ಖರ್ಚು ಮಾಡಿ 60 ಅಡಿ ಶಿವಲಿಂಗ ನಿರ್ಮಾಣ ಮಾಡಿಸುತ್ತಿದ್ದು ಪ್ರಸಿದ್ದ ಗಾಯಕರಿಂದ ಸಂಗೀತ ಕಾರ್ಯಕ್ರಮವನ್ನ ಸಹ ಮಾಡ್ತಿದ್ದಾರೆ. ಇನ್ನೂ ಈ ಬಗ್ಗೆ ಕೇಳಿದ್ರೆ ಎಂಟಿಬಿ ಆಪ್ತರು ಚುನಾವಣೆ ಇದೇ ಅಂತ ಮಾಡ್ತಿಲ್ಲ ಪ್ರತಿಭಾರಿ ಶಿವರಾತ್ರಿಗೆ ಉತ್ಸವ ಮಾಡ್ತಿದ್ರಿ ಆದ್ರೆ ಈ ಭಾರಿ ಮತ್ತಷ್ಟು ಅದ್ದೂರಿಯಾಗಿ ಮಾಡ್ತಿದ್ದೀವಿ ಅಂತಿದ್ದಾರೆ.
ಒಟ್ಟಾರೆ ಚುನಾವಣೆ ರಣರಂಗದಿಂದಲೆ ಪ್ರಸಿದ್ದಿಯಾಗಿದ್ದ ಹೊಸಕೋಟೆಯಲ್ಲಿ ಇದೀಗ ಕೋಟಿ ಕೋಟಿ ಗಿಪ್ಟ್ ಮತ್ತು ಲಕ್ಷ ಲಕ್ಷ ಕಾರ್ಯಕ್ರಮಗಳ ಸದ್ದು ಜೋರಾಗಿದೆ. ಇನ್ನೂ ಚುನಾವಣೆ ಘೋಷಣೆಗೂ ಮುನ್ನವೆ ಕೋಟಿ ಕೋಟಿ ಖರ್ಚು ಮಾಡ್ತಿರುವ ನಾಯಕರು ಮತದಾನಕ್ಕೆ ಮತ್ಯಾವೆಲ್ಲ ಕಸರತ್ತು ಮಾಡ್ತಾರೂ ಕಾದು ನೋಡಬೇಕಿದೆ.