Karnataka Assembly Session Live: ಕರ್ನಾಟಕ ವಿಧಾನಮಂಡಲ ಅಧಿವೇಶನ ಲೈವ್
Belagavi Assembly Session 2024: ಕರ್ನಾಟಕ ಚಳಿಗಾಲದ ವಿಧಾನಮಂಡಲ ಅಧಿವೇಶನವು ಆರಂಭವಾಗಿದೆ. ಎರಡು ವಾರಗಳ ಕಾಲ ನಡೆಯುವ ಅಧಿವೇಶನದಲ್ಲಿ ರಾಜ್ಯದ ಹಲವು ವಿಚಾರಗಳು ಚರ್ಚೆಯಾಗುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನ್ಯೂನ್ಯತೆಗಳನ್ನು ಪ್ರಸ್ತಾಪಿಸಲು ವಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಕ್ಕ ಉತ್ತರ ನೀಡಲು ಸರ್ಕಾರ ಕೂಡ ತಯಾರಿಯಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ (ಡಿಸೆಂಬರ್ 09) ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 20ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರವೇ ಬೆಳಗಾವಿಗೆ ಶಿಪ್ಟ್ ಆಗಿದೆ. ಈ ಬಾರಿ ದುಂದುವೆಚ್ಚ ಮಾಡದಂತೆ ಅಚ್ಚುಕಟ್ಟಾಗಿ ಅಧಿವೇಶನ ಮಾಡಲು ಕಳೆದ ಎರಡು ವಾರದಿಂದ ಬೆಳಗಾವಿ ಜಿಲ್ಲಾಡಳಿತ ಸಾಕಷ್ಟು ತಯಾರಿ ಮಾಡಿಕೊಂಡಿದೆ.
ಬೆಳಗಾವಿ ಅಧಿವೇಶನದಲ್ಲಿ ಐದು ವಿಧೇಯಕಗಳು ಮಂಡನೆಯಾಗಲಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ ತಿದ್ದುಪಡಿ, ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ವೇಗಳ ವಿಧೇಯಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಆಧ್ಯಾದೇಶ-2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆಧ್ಯಾದೇಶ-2024 ಮಂಡನೆಯಾಗಲಿವೆ.
ಹಾಗೇ ಮೂರು ಖಾಸಗಿ ವಿಧೇಯಕಗಳ ಮಂಡನೆಯಾಗಲಿವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ದರ್ಶನ್ ಪುಟ್ಟಣ್ಣಯ್ಯರಿಂದ ಖಾಸಗಿ ವಿಧೇಯಕ ಮಂಡನೆ, ಗಾಣಗಾಪುರ, ದತ್ತಾತ್ರೇಯ ದೇವಸ್ಥಾನ ಕ್ಷೇತ್ರಾಭಿವೃದ್ಧಿ ವಿಧೇಯಕವನ್ನ ಮಂಡಿಸಲಿರುವ ಎಂ.ವೈ ಪಾಟೀಲ್, ಹೆಚ್.ಕೆ. ಸುರೇಶ್‌ರಿಂದ ಬೇಲೂರು ಹಳೇಬೀಡು ವಿಶ್ವ ಪರಂಪರೆಯ ಪ್ರದೇಶ ನಿರ್ವಹಣೆ ಪ್ರಾಧಿಕಾರ ವಿಧೇಯಕ ಮಂಡನೆಯಾಗಲಿದೆ.