ವಿಜಯೇಂದ್ರ ವಿರುದ್ಧ ದೆಹಲಿಯಲ್ಲಿ ಯತ್ನಾಳ್ ಬಣದಿಂದ ಅಂತಿಮ ಹಂತದ ಕದನ
ಜಿಲ್ಲಾಧ್ಯಕ್ಷರ ಆಯ್ಕೆಗೆ ವಿರೋಧ.. ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ.. ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕೆಂಬ ಹಠ.. ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರೋ ಯತ್ನಾಳ್ ಟೀಮ್ ದೆಹಲಿಗೆ ಶಿಫ್ಟ್ ಆಗಿದ್ದು, ವಿಜಯೇಂದ್ರ ವಿರುದ್ಧ ಅಂತಿಮ ಹಂತದ ಕದನ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈಗಾಗಲೇ ಯತ್ನಾಳ್ ಬಣದ ಮೊದಲ ತಂಡ ದೆಹಲಿ ತಲುಪಿದೆ.
ನವದೆಹಲಿ, (ಫೆಬ್ರವರಿ 03): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕಿತ್ತಾಟದಿಂದ ಆರಂಭವಾದ ಬಿಜೆಪಿ ಬಣ ಬಡಿದಾಟ ಜಿಲ್ಲಾಧ್ಯಕ್ಷರ ನೇಮಕದವರೆಗೂ ಬಂದು ನಿಂತಿದೆ. ವಿಜಯೇಂದ್ರ ವಿರುದ್ಧ ಸಮರ ಸಾರಿರೋ ಯತ್ನಾಳ್ ಬಣ ದಿನಕ್ಕೊಂದು ಬಾಣ ಪ್ರಯೋಗಿಸ್ತಿದೆ. ಇಷ್ಟು ದಿನ ರಾಜ್ಯದಲ್ಲಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿದ್ದ ಯತ್ನಾಳ್ ಆ್ಯಂಡ್ ಟೀಂ ದೆಹಲಿಗೆ ಶಿಫ್ಟ್ ಆಗಿದ್ದು, ವಿಜಯೇಂದ್ರ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಹಂತದ ಪ್ರಹಾರಕ್ಕೆ ಮುಂದಾಗಿದೆ. ಈಗಾಗಲೇ ಯತ್ನಾಳ್ ಟೀಂನ ಕೆಲ ಸದಸ್ಯರ ತಂಡ ದೆಹಲಿ ತಲುಪಿದ್ದು, ಯತ್ನಾಳ್ ಸೇರಿದಂತೆ ಇನ್ನಿತರ ನಾಯಕರು ನಾಳೆ(ಫೆಬ್ರವರಿ 04) ದಿಲ್ಲಿಗೆ ತೆರಳಲಿದ್ದಾರೆ. ಇನ್ನು ಮೊದಲ ತಂಡದಲ್ಲಿ ರಮೇಶ್ ಜಾರಕಿಹೋಳಿ, ಕುಮರಬಂಗಾರಪ್ಪ, ಶ್ರೀಮಂತ ಪಾಟೀಲ್. ಸಂತೋಷ್ ಎನ್ ಆರ್ ಸೇರಿ ಹಲವು ನಾಯಕರು ಇದ್ದು, ಅವರು ಇದೀಗ ಕರ್ನಾಟಕ ಭವನಕ್ಕೆ ಆಗಮಿಸಿದೆ. ನಾಳೆ ಇನ್ನುಳಿದ ನಾಯಕರು ಬಂದ ಬಳಿಕ ಎಲ್ಲರೂ ಸೇರಿಕೊಂಡು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.

