ವಿಜಯೇಂದ್ರ ಬೆನ್ನಿಗೆ ನಿಂತ ಪ್ರೀತಂ ಗೌಡ: ಡಾ. ಸುಧಾಕರ್ಗೆ ತಿರುಗೇಟು
ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಜನವರಿ 30: ಬಿಜೆಪಿಯ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಸಂಸದ ಡಾ. ಕೆ ಸುಧಾಕರ್ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. 4-5 ವರ್ಷಗಳ ಹಿಂದೆ ಪಕ್ಷ ಸೇರಿರುವರಿಗೆ ಈ ಪ್ರಕ್ರಿಯೆ ಗೊತ್ತಿರಲ್ಲ. ನಿನ್ನೆ ಡಾ.ಸುಧಾಕರ್ ಮಾತಾಡಿದ್ದನ್ನು ನೋಡಿದರೆ ನನಗೆ ಅರ್ಥ ಆಯಿತು. ಬಿಜೆಪಿಯಲ್ಲಿ ಜಿಪಿಎ ವ್ಯವಸ್ಥೆ ಇಲ್ಲ ಎಂದರು.
ಡಾ. ಸುಧಾಕರ್ ಸಂಸದರಾದ ಮಾತ್ರಕ್ಕೆ ಇಡೀ ಚಿಕ್ಕಬಳ್ಳಾಪುರವನ್ನು ಅವರಿಗೆ ಬರೆದು ಕೊಡಲಾಗದು. ಸುಧಾಕರ್ ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ತಾವು ಹೇಳಿದಂತೆ ಕೇಳಬೇಕೆಂಬ ಮನಸ್ಥಿತಿಯಿಂದ ಸುಧಾಕರ್ ಹೊರಗೆ ಬರಬೇಕು. ಅವರಿಗೆ ಪಕ್ಷ ಈ ಐದು ವರ್ಷಗಳಲ್ಲಿ 3 ಬಾರಿ ಬಿ ಫಾರಂ ಕೊಟ್ಟಿದೆ. ಅಲ್ಲದೇ ನಾಲ್ಕು ವರ್ಷ ಡಾ.ಕೆ.ಸುಧಾಕರ್ ಅವರನ್ನು ಮಂತ್ರಿ ಮಾಡಲಾಗಿದೆ. ಪಿಕ್ಚರ್ ಲೈನ್ನಲ್ಲಿ ಇರೋರು, ಎಲ್ಲವೂ ಫಾಸ್ಟಾಗಿ ಆಗಲು ಬಯಸುತ್ತಾರೆ. ಸುಧಾಕರ್ ಶಾಸಕ ಆಗಿ, ಮಂತ್ರಿ ಆಗಿ, ಈಗ ಸಂಸದರಾಗಿದ್ದಾರೆ. ರಾಜ್ಯಾಧ್ಯಕ್ಷ ಆಗಿ ಸಿಎಂ ಆಗುವ ಲೆಕ್ಕಾಚಾರ ಇರಬಹುದು, ನನಗೆ ಗೊತ್ತಿಲ್ಲ. ಅವರು ವಿಜಯೇಂದ್ರ ಶಕ್ತಿ ಬಗ್ಗೆ ಮಾತಾಡುವುದು ಬೇಡ. ಅವರು ಮಾತಿನ ರೀತಿ ಬದಲಾಯಿಸಿಕೊಳ್ಳಬೇಕು ಎಂದು ಪ್ರೀತಂ ಗೌಡ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ