ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿಯಾಗುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ, ಮೇಕೆದಾಟು, ಮಹದಾಯಿ ಹಾಗೂ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅಕ್ಟೋಬರ್ 26ರಂದು ಸಭೆ ಕರೆದಿರುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 22: ರಾಜ್ಯದ ವಿವಿಧ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಕಸ್ತೂರಿ ರಂಗನ್ ವರದಿ, ರಾಜ್ಯದ ನೀರಾವರಿ ಯೋಜನೆಗಳು, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳ ಕುರಿತು ಕೇಂದ್ರ ಸಚಿವರ ಜತೆ ಡಿಕೆಶಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದ ಅರಣ್ಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ದೆಹಲಿಗೆ ಹೊರಡುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 26ರಂದು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿರುವುದಾಗಿ ತಿಳಿಸಿದರು.
ಕಬ್ಬು ಬೆಳೆಗಾರರ ಈ ಸಮಸ್ಯೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಹಲವು ರಾಜ್ಯಗಳಲ್ಲಿ ಇದೆ. ಹಾಗಾಗಿ ಆ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿದೆ. ಮಹದಾಯಿ, ಅರಣ್ಯ, ಆಂಧ್ರಪ್ರದೇಶದೊಂದಿಗಿನ ಕೆಲವು ವಿಚಾರಗಳು ಮತ್ತು ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆಯಂತಹ ವಿಷಯಗಳ ಕುರಿತು ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಸಭೆ ನಡೆಸುವ ಅಗತ್ಯವಿದೆ ಎಂದು ಡಿಕೆಶಿ ಹೇಳಿದರು. ಅವರು ಪೋಲೆಂಡ್ ಪ್ರಧಾನ ಮಂತ್ರಿಯನ್ನೂ ಭೇಟಿಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

