ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್: ಫುಟ್‌ಪಾತ್ ತೆರವು ವೀಕ್ಷಣೆ ಮಾಡಿ ಹೇಳಿದ್ದೇನು ನೋಡಿ
DK Shivakumar City rounds: ಬೆಂಗಳೂರು ಫುಟ್‌ಪಾತ್ ಒತ್ತುವರಿ ತೆರವು ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿವರಣೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ ಎಲ್ಲಾ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡಲು ಬೀದಿ ವ್ಯಾಪಾರಿಗಳಿಗೆ ನಿಗದಿತ ಜಾಗ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೃಷ್ಣ ಬೈರೇಗೌಡರು ಈ ಕಾರ್ಯವನ್ನು ಮುಂದುವರಿಸುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸುವುದು ಕಡ್ಡಾಯ ಎಂದಿದ್ದಾರೆ.
ಬೆಂಗಳೂರು, ಜುಲೈ 10: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಹೆಚ್ಎಎಲ್ ಏರ್ಪೋರ್ಟ್, ದೊಡ್ಡನೆಕ್ಕುಂದಿಯ ಕಾರ್ತಿಕ್ ನಗರ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯ ಪ್ರಗತಿ ವೀಕ್ಷಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ನಾನು ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದಾಗ ಈ ವಿಷಯದ ಬಗ್ಗೆ ಎಲ್ಲಾ ಪಕ್ಷಗಳ ಶಾಸಕರೊಂದಿಗೆ ಚರ್ಚೆ ನಡೆಸಿದ್ದೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಒಳಗೊಂಡ ಸಭೆಯಲ್ಲಿ, ಸಂಚಾರಕ್ಕೆ ಅಡ್ಡಿಯಾಗುವ ಒತ್ತುವರಿಗಳನ್ನು ತೆರವುಗೊಳಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು’ ಎಂದು ಹೇಳಿದ್ದಾರೆ.
ಸದ್ಯ ಫುಟ್‌ಪಾತ್ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಸುಮಾರು 60,000 ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿದ್ದು, ಅವರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಅಲ್ಲದೆ, 30,000ಕ್ಕೂ ಹೆಚ್ಚು ಜನರು ತಳ್ಳುಗಾಡಿಗಳಿಗೆ ಅರ್ಜಿ ಸಲ್ಲಿಸಿದ್ದು, ತ್ರಿಚಕ್ರ ವಾಹನಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ. ಈ ಕಾರ್ಯವನ್ನು ಕೃಷ್ಣ ಬೈರೇಗೌಡರು ಮುನ್ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳಿರುವುದರಿಂದ, ಅವುಗಳನ್ನು ಪಾಲಿಸುವುದು ಅನಿವಾರ್ಯ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾಗರಿಕರ ಹಕ್ಕುಗಳನ್ನು ಗೌರವಿಸುವ ಜೊತೆಗೆ, ಬೀದಿ ವ್ಯಾಪಾರಿಗಳಿಗೆ ನಿಗದಿತ ಪ್ರದೇಶಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

