ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಎಐಸಿಸಿ ಕಾರ್ಯಕಾರಿಣಿ ಸಭೆಯ ನೆಪದಲ್ಲಿ ಅದಕ್ಕೂ ಮುನ್ನ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಕುರ್ಚಿ ಬದಲಾವಣೆಯ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಪರ ಹೈಕಮಾಂಡ್ ಇದೆ ಎಂಬ ಹೇಳಿಕೆಗಳ ನಡುವೆ, ದೆಹಲಿಯಲ್ಲಿ ನಡೆಯಲಿರುವ ಈ ಸಭೆ ಎಲ್ಲರ ಗಮನ ಸೆಳೆದಿದೆ.
ಬೆಂಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಕುರಿತ ಬಿಕ್ಕಟ್ಟು ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲು ಅಣಿಯಾಗಿದ್ದಾರೆ. ಡಿಸೆಂಬರ್ 26 ಮತ್ತು 27 ರಂದು ನಡೆಯಲಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯ ನೆಪದಲ್ಲಿ, ಅದಕ್ಕೂ ಮುನ್ನ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದಾರೆ. ಮುಖ್ಯವಾಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ನಾಯಕತ್ವ ವಿಚಾರವನ್ನು ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಆದರೆ, ದೆಹಲಿಯಿಂದ ಬುಲಾವ್ ಬಂದರೆ ಮಾತ್ರ ದೆಹಲಿಗೆ ಪ್ರಯಾಣ ಬೆಳೆಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕಾರ್ಯಕಾರಣಿ ಸಭೆಯಲ್ಲಿ ಸಿಎಂ ಭಾಗಿಯಾಗುವ ಸಾಧ್ಯತೆ ಇದೆ. ಈ ನಡುವೆ ಗೃಹ ಸಚಿವ ಪರಮೇಶ್ವರ್, ಹೈಕಮಾಂಡ್ನ ಒಂದು ಮಾತಿನಿಂದ ಎಲ್ಲ ಗೊಂದಲ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಕೂಡ, ವರಿಷ್ಠರ ಕಡೆ ಮುಖ ಮಾಡಿದ್ದಾರೆ.
ಏತನ್ಮಧ್ಯೆ, ಡಿಕೆ ಶಿವಕುಮಾರ್ ದೆಹಲಿಗೆ ಬರುತ್ತಿರುವ ವಿಚಾರ ಗೊತ್ತಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರೇ ಗೊಂದಲ ಮಾಡಿಕೊಂಡಿದ್ದಾರೆ. ಅವರೇ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
