ಕರ್ನಾಟಕ ಅಧಿಕಾರ ಹಂಚಿಕೆ: ಖರ್ಗೆ ಜತೆ ರಾಹುಲ್ ಗಾಂಧಿ 25 ನಿಮಿಷ ಮಾತುಕತೆ! ಏನೇನು ಚರ್ಚೆ ನಡೆಯಿತು ನೋಡಿ
ಕರ್ನಾಟಕ ಕಾಂಗ್ರೆಸ್‌ನ ಎಲ್ಲ ಬೆಳವಣಿಗೆಗಳು ಹೈಕಮಾಂಡ್ ಅಂಗಳ ತಲುಪಿವೆ. ರಾಹುಲ್ ಗಾಂಧಿ ವರದಿಗಳನ್ನು ತರಿಸಿಕೊಂಡು ಚರ್ಚೆ ನಡೆಸಿದ್ದಾರೆ. ಈ ಮಧ್ಯೆ, ಮಲ್ಲಕಾರ್ಜುನ ಖರ್ಗೆ ಜತೆ ರಾಹುಲ್ ಗಾಂಧಿ ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭವಿಷ್ಯದ ಚುನಾವಣೆ, ಜಾತಿವಾರು ವರದಿ ಕುರಿತು ಗಂಭೀರ ಚಿಂತನೆಗಳು ನಡೆಯುತ್ತಿವೆ.
ಬೆಂಗಳೂರು, ನವೆಂಬರ್ 27: ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಕುರಿತ ಆಂತರಿಕ ಬೆಳವಣಿಗೆಗಳು ಇದೀಗ ಹೈಕಮಾಂಡ್ ಅಂಗಳ ತಲುಪಿವೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜ್ಯದ ಪ್ರಮುಖ ಮುಖಂಡರಿಂದ ಮಾಹಿತಿ ಪಡೆದು, ವರದಿಗಳನ್ನು ತರಿಸಿಕೊಂಡು ಆಳವಾದ ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 25 ನಿಮಿಷ ಕಾಲ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ದೆಹಲಿಯಿಂದಲೇ ಇಲ್ಲಿನ ಸಮಸ್ಯೆಗಳಿಗೆ ಔಷಧಿ ನೀಡುತ್ತೇವೆ. ಹೈಕಮಾಂಡ್‌ನಲ್ಲಿ ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ, ಅಧಿನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನಾವೆಲ್ಲ ಕುಳಿತು ಯೋಚಿಸಿ, ಏನು ಮಾಡಬೇಕು, ಯಾವ ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಖರ್ಗೆ ಭರವಸೆ ನೀಡಿದ್ದಾರೆ.
