ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ಫಿಕ್ಸ್: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ

Edited By:

Updated on: May 27, 2026 | 11:05 AM

ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಮೇ 28 ಗುರುವಾರ) ಬೆಳಗ್ಗೆ ರಾಜೀನಾಮೆ ನೀಡಲಿದ್ದು, ಅದಕ್ಕೂ ಮುನ್ನ ಸಚಿವರಿಗೆ ವಿದಾಯದ ಉಪಾಹಾರ ಕೂಟ ಆಯೋಜಿಸಿದ್ದಾರೆ. ರಾಜೀನಾಮೆ ನೀಡುವ ಸಂಬಂಧ ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯಾವಕಾಶ ಕೋರಿದ್ದಾರೆ.

ಬೆಂಗಳೂರು, ಮೇ 27: ಕರ್ನಾಟಕ ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಗುರುವಾರ) ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ಕಚೇರಿಯಿಂದ ಸಮಯ ಕೋರಲಾಗಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ಹೈಕಮಾಂಡ್ ನಡೆಸಿದ ಸುದೀರ್ಘ 7 ಗಂಟೆಗಳ ಮ್ಯಾರಥಾನ್ ಸಭೆಯಲ್ಲಿ, ರಾಹುಲ್ ಗಾಂಧಿ ಅವರೊಂದಿಗಿನ ಒನ್-ಟು-ಒನ್ ಮಾತುಕತೆ ಬಳಿಕ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ಸೂತ್ರದಂತೆ ಹುದ್ದೆ ತ್ಯಾಗ ಮಾಡಲು ಒಪ್ಪಿಕೊಂಡಿದ್ದರು. ದೆಹಲಿಯಿಂದ ವಾಪಸ್ ಬಂದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಾಳೆ ಬೆಳಗ್ಗೆ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಎಲ್ಲಾ ಸಚಿವರಿಗೆ ಉಪಾಹಾರ ಕೂಟ (Breakfast Meeting) ಆಯೋಜಿಸಿದ್ದು, ವೈಯಕ್ತಿಕವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ದೆಹಲಿಯಿಂದ ಗುರುವಾರ ಮುಂಜಾನೆ ಬೆಂಗಳೂರಿಗೆ ಮರಳಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಬ್ರೇಕ್​ಫಾಸ್ಟ್ ಮೀಟ್​​ನಲ್ಲಿ ಭಾಗಿಯಾಗಲಿದ್ದಾರೆ.

ಮತ್ತೊಂದೆಡೆ, ಸಿಎಂ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಆಪ್ತ ಸಚಿವರು ಹಾಗೂ ಶಾಸಕರು ದೌಡಾಯಿಸುತ್ತಿದ್ದಾರೆ. ಈಗಾಗಲೇ ಸಚಿವರಾದ ಜಮೀರ್ ಅಹ್ಮದ್ ಖಾನ್, ಎಂ.ಸಿ. ಸುಧಾಕರ್, ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ನಾಯಕರು ಸಿಎಂ ಭೇಟಿ ಮಾಡಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಉಪಾಹಾರ ಕೂಟ ಮುಗಿದ ತಕ್ಷಣವೇ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More