ಮಂಗಳೂರಿನಲ್ಲಿ ಕಾಲೇಜು ಪದಗ್ರಹಣ ವೇಳೆ ಭೀಕರ ದುರಂತ: ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು, 16 ವರ್ಷದ ಹುಡುಗನ ಬ್ರೈನ್ ಡೆಡ್
ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಸಮಾರಂಭದಲ್ಲಿ ಮಿತಿಮೀರಿದ ಸಂಭ್ರಮದ ವೇಳೆ ಬಾಲ್ಕನಿ ತಡೆಗೋಡೆ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 16 ವರ್ಷದ ಮೊಹಮ್ಮದ್ ಶಮಾಜ್ ಮೆದುಳು ನಿಷ್ಕ್ರಿಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಟ್ಟಡದ ಸುರಕ್ಷತೆ ಮತ್ತು ಆಯೋಜಕರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು, ಸೆ.26: ಕಾಲೇಜು ವಿದ್ಯಾರ್ಥಿಗಳ ಕಾಲೇಜು ಚುನಾವಣೆ ಹಾಗೂ ಪದಗ್ರಹಣ ಸಮಾರಂಭದ ಸಂಭ್ರಮಾಚರಣೆ ವೇಳೆ ಕರಾವಳಿಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಮಿತಿಮೀರಿದ ಸಂಭ್ರಮಾಚರಣೆಯ ನೆಪದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಿದ್ದಾಗ ಕಟ್ಟಡದ ಮೊದಲನೇ ಮಹಡಿಯ ಬಾಲ್ಕನಿಯ ತಡೆಗೋಡೆ ದಿಢೀರ್ ಕುಸಿದು ಬಿದ್ದು, ಐವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಬ್ರೈನ್ ಡೆಡ್ (ಮೆದುಳು ನಿಷ್ಕ್ರಿಯ) ಆಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ‘ರಮಾ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್’ನಲ್ಲಿ ಈ ದುರ್ಘಟನೆ ನಡೆದಿದೆ. ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಕಾಲೇಜು ಚುನಾವಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಮಿತಿಮೀರಿದ ಹುಚ್ಚಾಟದೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು. ಹಾಲ್ ಒಳಗಿನ ಸಂಭ್ರಮಾಚರಣೆಯನ್ನು ವೀಕ್ಷಿಸಲು ಹಾಗೂ ಫೋಟೋ-ವಿಡಿಯೋ ಮಾಡಲು ಅನೇಕ ವಿದ್ಯಾರ್ಥಿಗಳು ಮೊದಲನೇ ಮಹಡಿಯ ಬಾಲ್ಕನಿ ಬಳಿ ಜಮಾಯಿಸಿದ್ದರು. ವಿದ್ಯಾರ್ಥಿಗಳ ಭಾರ ಮತ್ತು ನೂಕಾಟ ತಡೆಯಲಾರದೆ ಬಾಲ್ಕನಿಯ ತಡೆಗೋಡೆ ಏಕಾಏಕಿ ಕುಸಿದುಬಿದ್ದಿದೆ. ತಡೆಗೋಡೆಯ ಮೇಲಿದ್ದ ವಿದ್ಯಾರ್ಥಿಗಳು ನೇರವಾಗಿ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಐವರನ್ನೂ ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಮೊಹಮ್ಮದ್ ಶಮಾಜ್ (16) ತಲೆಗೆ ಭಾರಿ ಏಟು ಬಿದ್ದಿದ್ದು ಮೆದುಳು ನಿಷ್ಕ್ರಿಯಗೊಂಡಿದೆ (ಬ್ರೈನ್ ಡೆಡ್). ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಮುಂದುವರಿದಿದೆ. ಮೊಹಮ್ಮದ್ ಶನಾನ್ ಅಹ್ಮದ್ (18), ಹನೀಫ್ (23), ದಾವೂದ್ ಫರ್ಸಿನ್ ಅಹ್ಮದ್ (18), ಮೊಹಮ್ಮದ್ ಶಾಕೀಲ್ ಹುಸೇನ್ (18) ಗಾಯಗಳಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ದುರಂತ ನಡೆದ ನಂತರವೂ ಕೆಲವು ವಿದ್ಯಾರ್ಥಿಗಳು ಮೈಮರೆತು ಗಲಾಟೆ ಮಾಡುವುದನ್ನು ಕಂಡು ಪಾಂಡೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೈಕ್ ಹಿಡಿದು “ನಿಮ್ಮ ಈ ಹುಚ್ಚಾಟವನ್ನು ಮೊದಲು ನಿಲ್ಲಿಸಿ” ಎಂದು ಎಚ್ಚರಿಕೆ ನೀಡಿ, ಸ್ಥಳದಲ್ಲಿದ್ದ ವಿದ್ಯಾರ್ಥಿಗಳನ್ನು ಚದುರಿಸಿದರು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಕಟ್ಟಡದ ಸುರಕ್ಷತೆ ಮತ್ತು ಕಾರ್ಯಕ್ರಮ ಆಯೋಜಕರ ನಿರ್ಲಕ್ಷ್ಯದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

