AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗ್ತಾ ಇಲ್ಲ ನಮ್ಮ ಕೈಯಲ್ಲಿ, ಬಸ್ ದರ ಏರಿಕೆ ಮಾಡಲೇಬೇಕು: ಸಾರಿಗೆ ಸಂಸ್ಥೆಗಳ ಸಂಕಷ್ಟ ಬಿಚ್ಚಿಟ್ಟ ಸಚಿವ ಭೈರತಿ ಸುರೇಶ್

“ಆಗ್ತಾ ಇಲ್ಲ ನಮ್ಮ ಕೈಯಲ್ಲಿ, ಬಸ್ ದರ ಏರಿಕೆ ಮಾಡಲೇಬೇಕು”: ಸಾರಿಗೆ ಸಂಸ್ಥೆಗಳ ಸಂಕಷ್ಟ ಬಿಚ್ಚಿಟ್ಟ ಸಚಿವ ಭೈರತಿ ಸುರೇಶ್

ಅಕ್ಷಯ್​ ಪಲ್ಲಮಜಲು​​
|

Updated on: Nov 02, 2026 | 9:33 PM

Share

ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಬಸ್ ಪ್ರಯಾಣ ದರ ಏರಿಕೆಯನ್ನು ದೃಢಪಡಿಸಿದ್ದಾರೆ. ಕೇಂದ್ರದ ಡೀಸೆಲ್ ದರ ಏರಿಕೆ, ನಿಗಮಗಳ ಭಾರಿ ನಷ್ಟ ಮತ್ತು 11 ವರ್ಷಗಳಿಂದ ದರ ಹೆಚ್ಚಿಸದಿರುವುದು ಇದಕ್ಕೆ ಕಾರಣ. ನ.4ರಂದು ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಶಕ್ತಿ ಯೋಜನೆಯಿಂದ ಸಂಸ್ಥೆಗಳಿಗೆ ನಷ್ಟವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ನ. 2: ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಮತ್ತೊಂದು ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಕರ್ನಾಟಕದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ನಿರ್ಧಾರವನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ. ನವೆಂಬರ್ 4 ರಂದು ಬೆಂಗಳೂರಿನಲ್ಲಿ ಕರೆಯಲಾಗಿರುವ ಉನ್ನತ ಮಟ್ಟದ ಸಭೆಯ ಬಳಿಕ ದರ ಏರಿಕೆಯ ನಿಖರ ಪ್ರಮಾಣವನ್ನು ಅಂತಿಮಗೊಳಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. “ಇದು ಯಾವುದೇ ಗುಪ್ತವಾಗಿ ನಡೆಯುತ್ತಿರುವ ನಿರ್ಧಾರವಲ್ಲ, ನಾಳೆ ಸಂಜೆ ತೀರ್ಮಾನಿಸಿ ನಾಡಿದ್ದು ಅಧಿಕೃತವಾಗಿ ಪ್ರಕಟಿಸಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಸ್ ದರ ಪರಿಷ್ಕರಣೆಗೆ ಸಾರಿಗೆ ಸಚಿವರು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಕೇಂದ್ರ ಸರ್ಕಾರವು ಕಳೆದ 9 ತಿಂಗಳುಗಳಲ್ಲಿ ಬಲ್ಕ್ ಡೀಸೆಲ್ ದರವನ್ನು 5 ಬಾರಿ ಹೆಚ್ಚಿಸಿದೆ. ಇದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಕೋಟ್ಯಾಂತರ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಪ್ರಸ್ತುತ ಒಟ್ಟು ₹9,000 ಕೋಟಿಗಳ ಭಾರಿ ಸಂಚಿತ ನಷ್ಟ ಎದುರಿಸುತ್ತಿವೆ. ಪ್ರತಿ ವರ್ಷ ನಿಗಮಗಳಿಗೆ ಸುಮಾರು ₹2,000 ಕೋಟಿ ನಷ್ಟವಾಗುತ್ತಿದೆ. ನಷ್ಟದ ಪ್ರಮಾಣ ಹೆಚ್ಚಿರುವುದರಿಂದ ನೌಕರರ ತಿಂಗಳ ಸಂಬಳ ಪಾವತಿಸುವುದು ಹಾಗೂ ದಿನನಿತ್ಯ ಡೀಸೆಲ್ ಖರೀದಿಸುವುದು ಕಷ್ಟಕರವಾಗಿದೆ. ಇತ್ತೀಚೆಗಷ್ಟೇ ಡೀಸೆಲ್ ಖರೀದಿಗಾಗಿ ಸಿಎಂ ಅವರು ₹200 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದನ್ನು ಸಚಿವರು ಸ್ಮರಿಸಿದ್ದಾರೆ.”ವಿರೋಧ ಪಕ್ಷಗಳು ಟೀಕಿಸುವುದು ಸಹಜ, ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಯಾಣ ದರ ಅತ್ಯಂತ ಕಡಿಮೆಯಿದೆ. 2015 ರಲ್ಲಿ (ಕಳೆದ 11 ವರ್ಷಗಳ ಹಿಂದೆ) ಒಮ್ಮೆ ಮಾತ್ರ ದರ ಹೆಚ್ಚಿಸಲಾಗಿತ್ತು. ದೀರ್ಘಾವಧಿಯಿಂದ ದರ ಪರಿಷ್ಕರಣೆಯಾಗದ ಹಿನ್ನೆಲೆಯಲ್ಲಿ ಸಂಸ್ಥೆ ನಡೆಸುವುದು ಸವಾಲಾಗಿದೆ,” ಎಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More