72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ಹೇಳುತಿದೆ ಲಾರಿ ಅವಸ್ಥೆ
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಮತ್ತು ಚಾಲಕ ಅರ್ಜುನ ಮೃತದೇಹ ಪತ್ತೆಯಾಗಿದೆ. ಲಾರಿಯೊಳಗೆ ಅರ್ಜುನ ಮೃತದೇಹ ಸಿಕ್ಕಿದೆ. ಗುಡ್ಡ ಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಈ ಲಾರಿ ಗುಡ್ಡಕುಸಿತದ ಭೀಕರತೆಗೆ ಸಾಕ್ಷಿಯಾಗಿದೆ.
ಕಾರವಾರ, (ಸೆಪ್ಟೆಂಬರ್ 25): ಶಿರೂರು ಗುಡ್ಡ ಕುಸಿದ ಮೇಲೆ ನಡೆಯುತ್ತಿದ್ದ ನಿರಂತರ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಕೊಚ್ಚಿಕೊಂಡು ಹೋದ ಕೇರಳದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್‌ಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಕೊನೆಗೂ 72 ದಿನಗಳ ನಂತರ ಲಾರಿ ಜೊತೆಗೆ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ. ಇಂದು (ಸೆ.25) ನಡೆದ ಕಾರ್ಯಾಚರಣೆಯಲ್ಲಿ ಮುಳುಗಿದ್ದ ಲಾರಿಯನ್ನು ಮೇಲೆ ಎತ್ತಲಾಗಿದೆ. ಈ ವೇಳೆ ಅರ್ಜುನ್ ಶವ ಲಾರಿಯಲ್ಲೇ ಪತ್ತೆಯಾಗಿದೆ.
ಕಳೆದ ಜುಲೈ 16ರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಈ ದುರಂತ ಘಟನೆ ನಡೆದಿತ್ತು. 10ಕ್ಕೂ ಹೆಚ್ಚು ಮಂದಿ ಶವ ಪತ್ತೆ ಮಾಡಿದ ರಕ್ಷಣಾ ಕಾರ್ಯಾಚರಣೆಗೆ ಕೇರಳ ಮೂಲದ ಲಾರಿ ಚಾಲಕನ ಸುಳಿವೇ ಸಿಕ್ಕಿರಲಿಲ್ಲ. ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು. ನದಿಯ ಕಾರ್ಯಾಚರಣೆ ವೇಳೆ ಅರ್ಜುನ್ ಹಾಗೂ ಲಾರಿಯನ್ನು ಪತ್ತೆ ಮಾಡಲಾಗಿದೆ. ಗುಡ್ಡ ಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಈ ಲಾರಿ ಗುಡ್ಡಕುಸಿತದ ಭೀಕರತೆಗೆ ಸಾಕ್ಷಿಯಾಗಿದೆ.