ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ: ಭಕ್ತರ ಮೇಲೆಯೇ ಉರುಳಿಬಿದ್ದ ಬೃಹತ್ ಲೈಟ್ ಸೆಟ್

Edited By:

Updated on: Oct 14, 2026 | 11:04 AM

ಶರನ್ನವರಾತ್ರಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಎದುರು ಅಲಂಕಾರಿಕ ಲೈಟ್ ಸೆಟ್ ಗಾಳಿಗೆ ಬಿದ್ದು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವಸ್ಥಾನದ ವಾಣಿಜ್ಯ ಸಂಕೀರ್ಣದ ಮಹಡಿಯಿಂದ ಲೈಟ್ ಸೆಟ್ ಪತನವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಉಡುಪಿ, ಅ.13: ಶರನ್ನವರಾತ್ರಿಯ ಧಾರ್ಮಿಕ ಸಂಭ್ರಮದಲ್ಲಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ಮಹಡಿಗೆ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಗಾಳಿಯ ರಭಸಕ್ಕೆ ಏಕಾಏಕಿ ಭಕ್ತರ ಮೇಲೆ ಬಿದ್ದ ಪರಿಣಾಮ ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆ ತೀವ್ರ ಬಿಸಿಲು ಇದ್ದ ಕಾರಣ ದೇವಸ್ಥಾನದ ಮುಂಭಾಗದಲ್ಲಿದ್ದ ವಾಣಿಜ್ಯ ಸಂಕೀರ್ಣದ ನೆರಳಿನ ಅಡಿಯಲ್ಲಿ ಹಲವು ಭಕ್ತಾದಿಗಳು ನಿಂತುಕೊಂಡಿದ್ದರು. ನವರಾತ್ರಿ ಉತ್ಸವದ ವಿಶೇಷ ಅಲಂಕಾರಕ್ಕಾಗಿ ಕಟ್ಟಡದ ಮಹಡಿಯ ಮೇಲೆ ಬೃಹತ್ ಗಾತ್ರದ ಲೈಟ್ ಸೆಟ್‌ಗಳನ್ನು ಅಳವಡಿಸಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ರಭಸವಾಗಿ ಗಾಳಿ ಬೀಸಿದ ಪರಿಣಾಮ, ಲೈಟ್ ಸೆಟ್ ಕಟ್ಟಡದ ಮೇಲಿಂದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ನೇರವಾಗಿ ಉರುಳಿ ಬಿದ್ದಿದೆ. ಲೈಟ್ ಸೆಟ್ ಬೀಳುತ್ತಿದ್ದಂತೆಯೇ ಜಾಗರೂಕರಾದ ಬಹುತೇಕ ಭಕ್ತರು ತಕ್ಷಣವೇ ಅಡಿಯಿಂದ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮೂವರು ಭಕ್ತರ ಮೇಲೆ ಈ ಭಾರಿ ಗಾತ್ರದ ಲೈಟ್ ಸೆಟ್ ಒರಗಿ ಬಿದ್ದಿದೆ. ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆಯೇ ಲೈಟ್ ಸೆಟ್ ಬಿದ್ದಿದ್ದರಿಂದ, ಅವರಿಗೆ ಮೇಲೇಳಲು ಸಾಧ್ಯವಾಗದೆ ತೀವ್ರವಾಗಿ ಒದ್ದಾಡುವಂತಾಯಿತು. ಘಟನೆಯನ್ನು ಕಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬಿದ್ದಿದ್ದ ಲೈಟ್ ಸೆಟ್ ಅನ್ನು ತೆರವುಗೊಳಿಸಿ, ತೀವ್ರವಾಗಿ ಗಾಯಗೊಂಡಿದ್ದ ವಯೋವೃದ್ಧರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರದಲ್ಲಿ ನೆರೆದಿರುವಾಗ ಇಂತಹ ತಾತ್ಕಾಲಿಕ ಲೈಟಿಂಗ್ ಹಾಗೂ ಬ್ಯಾನರ್ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More