ಬೇಸಿಗೆ ಆರಂಭಕ್ಕೂ ಮೊದಲೇ ಕೋಣನೂರು, ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ನೂರಾರು ಎಕರೆ ಪ್ರದೇಶ ಭಸ್ಮವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ರೈತರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಹರ ಸಾಹಸಪಟ್ಟಿದ್ದಾರೆ.
ಮೈಸೂರು, ಫೆ.04: ಬೇಸಿಗೆ ಆರಂಭಕ್ಕೂ ಮೊದಲೇ ಅರಣ್ಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಅರಣ್ಯ ಪ್ರದೇಶದ ಒಂದಷ್ಟು ಭಾಗ ಸುಟ್ಟು ಹೋಗಿದೆ. ಬೆಂಕಿಯಿಂದ ನೂರಾರು ಎಕರೆ ಪ್ರದೇಶ ಭಸ್ಮವಾಗಿದೆ.
ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಎತ್ತಿನ ಮುಂಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುಳಿಗಾಳಿಗೆ ಸಿಲುಕಿ ಮೇವಿನ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿದ್ದು ಒಂದಷ್ಟು ಪ್ರದೇಶ ಬೆಂಕಿಗಾಹುತಿಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ರೈತರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಹರ ಸಾಹಸಪಟ್ಟಿದ್ದಾರೆ. ದನ-ಕರುಗಳು ಮತ್ತು ಕಾಡು ಪ್ರಾಣಿಗಳ ಆಹಾರವಾಗಿದ್ದ ಪ್ರದೇಶ ಈಗ ಸುಟ್ಟು ಕರಕಲಾಗಿದೆ. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗುವ ಸಾಧ್ಯತೆ ಇದೆ. ಬೇಸಿಗೆ ಹಿನ್ನಲೆ ಅರಣ್ಯಕ್ಕೆ ಬೆಂಕಿ ಬೀಳದಂತೆ ಅಗತ್ಯ ಕ್ರಮ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ