ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ಮಹಾ ದಾಸೋಹದಲ್ಲಿ ಹೊಸ ದಾಖಲೆ, ಲಕ್ಷಲಕ್ಷ ರೊಟ್ಟಿ ಸಂಗ್ರಹ!
ಗವಿ ಮಠದ ಮಹಾದಾಸೋಹದಲ್ಲಿ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಸೇವನೆ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಗವಿ ಮಠಕ್ಕೆ ಆಗಮಿಸುತ್ತಿದ್ದು, ದಾಸೋಹದ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರ ಅಪಾರ ಸಹಕಾರ, ದಾನಿಗಳ ಉದಾರ ಮನಸ್ಸು ಹಾಗೂ ಮಠದ ವ್ಯವಸ್ಥಿತ ನಿರ್ವಹಣೆಯಿಂದಾಗಿ ಗವಿ ಮಠದ ದಾಸೋಹ ಈ ಬಾರಿ ದಾಖಲೆ ನಿರ್ಮಿಸಿದ್ದು, ಅನ್ನದಾನವೇ ಮಹಾದಾನ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದೆ.
ಕೊಪ್ಪಳ, ಜನವರಿ 8: ಕೊಪ್ಪಳದ ಗವಿ ಮಠದ ಮಹಾದಾಸೋಹ ಈ ಬಾರಿ ಹೊಸ ದಾಖಲೆ ಬರೆದಿದ್ದು, ಅಪಾರ ಪ್ರಮಾಣದ ಅನ್ನದಾನ ಹಾಗೂ ಪ್ರಸಾದ ಸಂಗ್ರಹದೊಂದಿಗೆ ಭಕ್ತರಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಗವಿ ಮಠದ ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿರುವ ದಾಸೋಹವು ಈ ವರ್ಷ ಜನವರಿ 1ರಿಂದ ಆರಂಭವಾಗಿದ್ದು, ಕಳೆದ ಎಂಟು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಬಾರಿ ಗವಿ ಮಠದ ದಾಸೋಹದಲ್ಲಿ ದಾಖಲೆ ಪ್ರಮಾಣದ ಆಹಾರ ಸಂಗ್ರಹವಾಗಿದೆ. ಒಟ್ಟು 18 ಲಕ್ಷಕ್ಕೂ ಅಧಿಕ ರೊಟ್ಟಿಗಳು ಸಂಗ್ರಹವಾಗಿದ್ದು, ಇದು ಇತಿಹಾಸದಲ್ಲೇ ಅತ್ಯಧಿಕ ಎನ್ನಲಾಗಿದೆ. ಜೊತೆಗೆ 25 ಕ್ವಿಂಟಾಲ್ ಬುಂದಿ, 175 ಕ್ವಿಂಟಾಲ್ ಮೈಸೂರು ಪಾಕ್, 62 ಕ್ವಿಂಟಾಲ್ ಶೇಂಗಾ ಹೊಳಿಗೆ, 467 ಕ್ವಿಂಟಾಲ್ ಮಾದಲಿ, 5 ಕ್ವಿಂಟಾಲ್ ಜಿಲೇಬಿ ಹಾಗೂ ಸುಮಾರು 6 ಲಕ್ಷ ಮಿರ್ಚಿ ಸೇರಿದಂತೆ ವಿವಿಧ ಖಾದ್ಯಗಳು ದಾಸೋಹಕ್ಕೆ ಹರಿದು ಬಂದಿವೆ.
ಇದುವರೆಗೆ ನಡೆದ ದಾಸೋಹದಲ್ಲಿ ಸುಮಾರು 8 ಲಕ್ಷ ರೊಟ್ಟಿಗಳ ವಿತರಣೆಯಾಗಿದ್ದು, ಪ್ರಸಾದ ತಯಾರಿಗಾಗಿ 650 ಕ್ವಿಂಟಾಲ್ ಅಕ್ಕಿ ಬಳಕೆಯಾಗಿದೆ. ಕಳೆದ ಹಲವು ದಿನಗಳಿಂದ ಸಾವಿರಾರು ಸ್ವಯಂಸೇವಕರು ದಾಸೋಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
