ವಿಪಕ್ಷ ನಾಯಕ ಸಿದ್ದರಾಮಯ್ಯ ಕೃಷಿ ಸಚಿವ ಬಿ ಸಿ ಪಾಟೀಲರನ್ನು ಸದನದಲ್ಲಿ ಫಜೀತಿಗೊಳಪಡಿಸಿದ ಪ್ರಸಂಗ
‘ಏನ್ರೀ ತಲೆ ಅಲ್ಲಾಡಿಸ್ತೀರಾ?’ ಅಂತ ಸಿದ್ದರಾಮಯ್ಯ ಅಸಹನೆಯಿಂದ ಕೇಳಿದಾಗ ಪಾಟೀಲರು, ‘ಮತ್ತೇನು ಹೇಳಲಿ?’ ಅನ್ನುತ್ತಾರೆ. ಆಗ ಸಿದ್ರಾಮಯ್ಯನವರು, ‘ಗೊತ್ತಿದ್ರೆ ಗೊತ್ತು ಅನ್ನಿ ಇಲ್ಲಾಂದ್ರೆ ಇಲ್ಲ ಅನ್ನಿ,’ ಎನ್ನುತ್ತಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಸದನದಲ್ಲಿ ಮಾತಾಡಲು ಎದ್ದು ನಿಂತರೆ ಆಡಳಿತ ಪಕ್ಷದ ಸದಸ್ಯರು ಅದರಲ್ಲೂ ವಿಶೇಷವಾಗಿ ಸಚಿವರು ಆತಂಕಕ್ಕೊಳಗಾಗುತ್ತಾರೆ. ಯಾವುದಾದರೂ ವಿಷಯದ ಮೇಲೆ ಚರ್ಚೆ ನಡೆಯುವಾಗ ಅವರು ಸುಖಾಸುಮ್ಮನೆ ಸರ್ಕಾರಕ್ಕೆ ಪ್ರಶ್ನೆ ಕೇಳುವುದಿಲ್ಲ. ಅದಕ್ಕೆ ತಕ್ಕನಾದ ಪೂರ್ವತಯಾರಿ (homework) ಮಾಡಿಕೊಂಡೇ ಸದನಕ್ಕೆ ಹೋಗಿರುತ್ತಾರೆ. ಹಾಗೆಯೇ, ಅವರು ಕೇಳುವ ಪ್ರಶ್ನೆಗೆ ಮಂತ್ರಿಗಳು ಉಡಾಫೆ ಉತ್ತರ ಕೊಟ್ಟರೆ ಅವರು ಸಹಿಸುವುದಿಲ್ಲ. ಮಂಗಳವಾರ ಕೃಷಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಾಗ ಸದರಿ ಯೋಜನೆ ಕುರಿತು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಏನು ಹೇಳಿದ್ದಾರೆ ಗೊತ್ತೇನ್ರೀ ನಿಮಗೆ ಅಂತ ಕೃಷಿ ಸಚಿವ ಬಿಸಿ ಪಾಟೀಲ (BC Patil) ಅವರನ್ನು ಸಿದ್ದರಾಮಯ್ಯ ಕೇಳುತ್ತಾರೆ. ಅದಕ್ಕೆ ಪಾಟೀಲರು ಸುಮ್ಮನೆ ತಲೆ ಅಲ್ಲಾಡಿಸಿದಾಗ ವಿರೋಧ ಪಕ್ಷದ ನಾಯಕರಿಗೆ ರೇಗುತ್ತದೆ.
‘ಏನ್ರೀ ತಲೆ ಅಲ್ಲಾಡಿಸ್ತೀರಾ?’ ಅಂತ ಸಿದ್ದರಾಮಯ್ಯ ಅಸಹನೆಯಿಂದ ಕೇಳಿದಾಗ ಪಾಟೀಲರು, ‘ಮತ್ತೇನು ಹೇಳಲಿ?’ ಅನ್ನುತ್ತಾರೆ. ಆಗ ಸಿದ್ರಾಮಯ್ಯನವರು, ‘ಗೊತ್ತಿದ್ರೆ ಗೊತ್ತು ಅನ್ನಿ ಇಲ್ಲಾಂದ್ರೆ ಇಲ್ಲ ಅನ್ನಿ,’ ಎನ್ನುತ್ತಾರೆ. ‘ನೀವೇ ಹೇಳಿ,’ ಎಂದು ಪಾಟೀಲರು ಹೇಳಿದ ಮೇಲೆ ಸಿದ್ದರಾಮಯ್ಯನವರು ವಾರ್ಷಿಕ ವರದಿಯಲ್ಲಿ ಪ್ರಕಟವಾಗಿರುವುದನ್ನು ಓದಲಾರಂಭಿಸುತ್ತಾರೆ.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ ಯೋಜನೆಯ ಪರಿಣಾಮ ಮಳೆ ಕುಂಠಿತಗೊಂಡಿರುವ ವರ್ಷಗಳಲ್ಲಿ ಫಲಾನುಭವಿ ರೈತರು ಇಳುವರಿಯನ್ನು ಕಾಪಾಡಿಕೊಳ್ಳುವುದಲ್ಲದೆ ಹೆಚ್ಚುವರಿ ಇಳುವರಿ ಮತ್ತು ಆದಾಯವನ್ನು ಪಡೆಯುವುದು ಅನುಕೂಲವಾಯಿತು. ಅಲ್ಲದೆ ಫಲಾನುಭವಿ ರೈತರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಿದೆ ಮತ್ತು ಗ್ರಾಮೀಣ ಭಾಗಗಳಿಂದ ರೈತರು ಗುಳೆ ಹೋಗುವುದನ್ನು ಕಡಿಮೆ ಮಾಡಿದೆ. ನ್ಯಾಪ್ ಕಾಮ್ಸ್ ಸಂಸ್ಥೆಯ ವರದಿಯ ಪ್ರಕಾರ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಭೂಬಳಕೆ ವಿಧಾನ ಪರಿವರ್ತನೆಗೊಂಡಿದೆ ಮತ್ತು ಬೆಳೆ ವಿಸ್ತೀರ್ಣ ಗಮನಾರ್ಹವಾಗಿ ಹೆಚ್ಚಿದೆ ಎಂದು ಸಿದ್ದರಾಮಯ್ಯ ಕೃಷಿ ವಾರ್ಷಿಕ ವರದಿಯಲ್ಲಿನ ವಿವರವನ್ನು ಓದಿ ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದರೆ ನಿಮಗೆ ತೊಂದರೆ ಗ್ಯಾರಂಟಿ ಎಂದು ಬೆದರಿಕೆ ಹಾಕಿದ ಟಿಎಂಸಿ ಶಾಸಕ; ವಿಡಿಯೋ ಶೇರ್ ಮಾಡಿದ ಬಿಜೆಪಿ ನಾಯಕ