ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಭಯಭೀತರಾಗಿದ್ದು, ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಬರಲು ಸಹ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಾಮರಾಜನಗರ, ಜನವರಿ 10: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದೆಡೆ ಹುಲಿ ಉಪಟಳದಿಂದ ಜನತೆ ಆತಂಕದಲ್ಲಿರುವಾಗಲೇ, ಇದೀಗ ಚಿರತೆಯ ಭೀತಿ ಗ್ರಾಮಸ್ಥರನ್ನು ಕಾಡತೊಡಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಚಿರತೆ ರಾಜಾರೋಷವಾಗಿ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಗ್ರಾಮದ ಒಳಗೇ ನಿರ್ಭಯವಾಗಿ ಓಡಾಡುತ್ತಿರುವ ಚಿರತೆಯನ್ನು ಕಂಡು ಗ್ರಾಮಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಿರತೆ ಆಗಾಗ ಗ್ರಾಮಕ್ಕೆ ನುಗ್ಗಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ನೇನೆಕಟ್ಟೆ ಗ್ರಾಮ ಬಂಡೀಪುರ ಟೈಗರ್ ರಿಸರ್ವ್ ಅರಣ್ಯಕ್ಕೆ ಅಂಟಿಕೊಂಡಂತಿರುವುದರಿಂದ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ ಎನ್ನಲಾಗಿದೆ.
