ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು, ಐವರು ನಾಪತ್ತೆ

Updated on: Jul 07, 2026 | 8:30 PM

ಇದೇ ವೇಳೆ ವಯನಾಡ್ ಜಿಲ್ಲೆಯ ಭೂಕುಸಿತದ ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆಯ ಒಂದು ಭಾಗವು ದಿಢೀರನೆ ಕುಸಿದು, ಅಲ್ಲಿದ್ದ ಟ್ಯಾಂಕರ್ ಮತ್ತು ಹಲವು ವಾಹನಗಳನ್ನು ಕ್ಷಣಾರ್ಧದಲ್ಲಿ ಕೊಚ್ಚಿ ಕೊಂಡೊಯ್ಯುವ ಭಯಾನಕ ದೃಶ್ಯ ಅದರಲ್ಲಿ ಸೆರೆಯಾಗಿದೆ. ಜನರು ಕೊಡೆಗಳನ್ನು ಹಿಡಿದುಕೊಂಡು ದೂರದಿಂದಲೇ ನೋಡುತ್ತಿದ್ದಂತೆಯೇ ಟನ್ ಗಟ್ಟಲೆ ಮಣ್ಣು ಮತ್ತು ಅವಶೇಷಗಳು ಗುಡ್ಡದಿಂದ ಕೆಳಕ್ಕೆ ಕುಸಿದಿವೆ. ಟ್ಯಾಂಕರ್ ಸುಮಾರು 100 ಅಡಿ ಆಳಕ್ಕೆ ಬಿದ್ದಿದ್ದು, ಅದರಲ್ಲಿದ್ದ ಮೂವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಯನಾಡ್, ಜುಲೈ 7: ಕೇರಳದ ವಯನಾಡ್  (Wayanad Landslide) ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಎಂಬಲ್ಲಿ ಇಂದು (ಜುಲೈ 7) ನಡೆದ ಭೀಕರ ಭೂಕುಸಿತದಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ‘ಆನೆಕಂಪೋಯಿಲ್-ಮೇಪ್ಪಾಡಿ ಸುರಂಗ ರಸ್ತೆ ಯೋಜನೆ’ಯ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮೀನಾಕ್ಷಿ ಸೇತುವೆಯ ಬಳಿ ಈ ದುರಂತ ಸಂಭವಿಸಿದೆ. ಈ ದುರಂತದಿಂದ ಒಟ್ಟು 18 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, 10 ಜನರನ್ನು ಮೇಪ್ಪಾಡಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ಉಳಿದ ಐವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

“ದುರಂತ ಸಂಭವಿಸಿದ ಸಮಯದಲ್ಲಿ ಅಲ್ಲಿ ಯಾವುದೇ ಕಾರ್ಮಿಕರು ಕೆಲಸ ಮಾಡುತ್ತಿರಲಿಲ್ಲ. ಮಣ್ಣಿನ ಅಡಿಯಲ್ಲಿ ಸಿಲುಕಿರುವವರು ಇಂಜಿನಿಯರ್‌ಗಳು ಮತ್ತು ಭದ್ರತಾ ಸಿಬ್ಬಂದಿ ಎಂದು ಶಂಕಿಸಲಾಗಿದೆ. ಒಂದು ವೇಳೆ ಅಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಮತ್ತಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರನ್ನು ಕರೆದೊಯ್ಯಲು ಬಳಸಲಾಗುತ್ತಿದ್ದ ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸೊಂದು ಭೂಕುಸಿತದ ಭಾರಿ ಹೊಡೆತಕ್ಕೆ ಸಿಲುಕಿ ಹತ್ತಿರದ ನದಿಗೆ ಉರುಳಿದ್ದು, ಅರ್ಧದಷ್ಟು ನೀರಿನಲ್ಲಿ ಮುಳುಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us