ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ
ಮಂಗಳೂರು ದೈವ ನೆಮೋತ್ಸವದಲ್ಲಿ ವೈರಲ್ ಆದ ವಿಡಿಯೋ, ಸಾಂಸ್ಕೃತಿಕ ಆಚಾರ-ವಿಚಾರಗಳ ಮಹತ್ವವನ್ನು ಎತ್ತಿ ತೋರಿಸಿದೆ. ದಕ್ಷಿಣ ಕನ್ನಡದ ದೈವಿಕ ಆಚರಣೆಗಳಲ್ಲಿ ಗೌರವ ಮತ್ತು ಎಚ್ಚರಿಕೆ ಅಗತ್ಯ. ಫೋಟೋ, ವಿಡಿಯೋ ಹಾಗೂ ವಸ್ತ್ರ ಸಂಹಿತೆಯ ಉಲ್ಲಂಘನೆ ದೈವದ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಈ ಘಟನೆ ತಿಳಿಸುತ್ತದೆ. ದೈವದ ಮುಂದೆ ಹೇಗೆ ವರ್ತಿಸಬೇಕು ಎಂಬುದಕ್ಕೆ ಇದು ಪಾಠ.
ಮಂಗಳೂರು, ಮಾ.26: ಮಂಗಳೂರು: ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @chasing_roadss ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೇಮೋತ್ಸವ ನಡೆಯುತ್ತಿದ್ದಾಗ ದೈವವು ಹಠಾತ್ತಾಗಿ ವಿಡಿಯೋ ಮಾಡುತ್ತಿದ್ದವರತ್ತ ತಿರುಗಿ ತೀವ್ರ ಆಕ್ರೋಶದಿಂದ ಎಚ್ಚರಿಕೆ ನೀಡಿದೆ. ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಪ್ರಕಾರ, ಕೇವಲ ವಿಡಿಯೋ ಮಾಡಿದ್ದಕ್ಕೆ ಮಾತ್ರವಲ್ಲದೆ, ತಾನು ಕೆಂಪು ಬಣ್ಣದ ಬಟ್ಟೆ ಧರಿಸಿದ್ದಕ್ಕೂ ದೈವವು ಕೋಪಗೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವದ ಆವೇಶ ಮತ್ತು ಆಕ್ರೋಶ ಕಂಡು ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಕರಾವಳಿಯ ದೈವಗಳ ಮುಂದೆ ನಿಲ್ಲುವಾಗ ಬಟ್ಟೆ, ನಡವಳಿಕೆ ಮತ್ತು ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇತ್ತೀಚಿನ ‘ರೀಲ್ಸ್’ ಸಂಸ್ಕೃತಿಯು ಈ ಪವಿತ್ರ ಸಂಪ್ರದಾಯದ ಗಂಭೀರತೆಯನ್ನು ಹಾಳುಮಾಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

