ತುಳುನಾಡಿನ ಕಾರ್ಣಿಕ ದೈವ ನೇಮೋತ್ಸವದಲ್ಲಿ ರಾಜಕೀಯ: ಇರಂತಬೆಟ್ಟು ಮನೆತನ ಅಸಮಾಧಾನ
ರಾಜಕೀಯ ಗುದ್ದಾಟಕ್ಕೆ ತುಳುನಾಡಿನ ಕಾರ್ಣಿಕ ದೈವದ ನೇಮೋತ್ಸವ ಸ್ಥಗಿತ ಎನ್ನುವ ವ್ಯವಸ್ಥಾಪನಾ ಸಮಿತಿಯ ಆರೋಪಕ್ಕೆ ಗುತ್ತು ಮನೆತನಗಳ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಇರಂತಬೆಟ್ಟು ಮನೆತನದ ಪ್ರಮುಖರಾದ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ಮನೆತನದ ಪ್ರಮುಖರಲ್ಲದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಂಗಳೂರು, (ಮಾರ್ಚ್ 11): ರಾಜಕೀಯ ಗುದ್ದಾಟಕ್ಕೆ ತುಳುನಾಡಿನ ಕಾರ್ಣಿಕ ದೈವದ ನೇಮೋತ್ಸವ ಸ್ಥಗಿತ ಎನ್ನುವ ವ್ಯವಸ್ಥಾಪನಾ ಸಮಿತಿಯ ಆರೋಪಕ್ಕೆ ಗುತ್ತು ಮನೆತನಗಳ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಇರಂತಬೆಟ್ಟು ಮನೆತನದ ಪ್ರಮುಖರಾದ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ಮನೆತನದ ಪ್ರಮುಖರಲ್ಲದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. 600 ವರ್ಷಗಳ ಇತಿಹಾಸ ಈ ದೈವಸ್ಥಾನಗಳಿಗೆ ಇದೆ. ನಾಲ್ಕು ಮನೆತನದವರು ಸೇರಿಕೊಂಡು ನೇಮೋತ್ಸವ ಮಾಡಿಕೊಂಡು ಬರುತ್ತಿದ್ದೇವೆ. ಏಕಾಏಕಿ ಒಂದು ತಂಡ ಸಮಿತಿ ರಚನೆ ಮಾಡಿದ್ದು, ಸಮಿತಿ ರಚನೆ ಮಾಡಿ ಅವರವರೇ ಜವಾಬ್ದಾರಿ ಹಂಚಿಕೊಂಡಿದ್ದಾರೆ. ನಮ್ಮ ಆಮಂತ್ರಣ ಪತ್ರಿಕೆ ಹಂಚಿದ ಬಳಿಕ ಅವರು ಪ್ರತ್ಯೇಕ ಆಮಂತ್ರಣ ಪತ್ರಿಕೆ ಹಂಚಿದ್ದಾರೆ. ಊರಿನಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
ನೇಮೋತ್ಸವ ಮಾಡಲು ನಮಗೆ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ಧಿಕ್ಕರಿಸಿ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ ಅವರಿಗೂ ನೇಮೋತ್ಸವ ನಡೆಸಲು ಆದೇಶ ನೀಡಿದ್ದಾರೆ. ಪಾರಂಪರಿಕವಾಗಿ ನಾವೇ ನೇಮೋತ್ಸವ ಮಾಡಿಕೊಂಡು ಬಂದಿದ್ದೇವೆ. ಗ್ರಾಮದ ಜನರಿಗೆ ಯಾರು ನೇಮೋತ್ಸವ ಮಾಡ್ತಾರೆ ಎಂಬುದು ಮುಖ್ಯವಲ್ಲ. ಗ್ರಾಮಸ್ಥರಿಗೆ ನೇಮೋತ್ಸವ ಆಗಬೇಕಿತ್ತು. ನಾವು ನೇಮೋತ್ಸವ ನಿಲ್ಲಿಸಿಲ್ಲ. ಸಂಪ್ರದಾಯ ಬದ್ದವಾಗಿ ನಮಗೆ ನೇಮೋತ್ಸವ ನಡೆಸಲು ಕೋರ್ಟ್ ಅನುಮತಿ ನೀಡಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಅಧಿಕಾರಿಗಳು ನೇಮೋತ್ಸವಕ್ಕೆ ತಡೆ ನೀಡಿದ್ದಾರೆ. ಊರಿನವರಿಗೆ ಯಾರ ಕಡೆ ಹೋಗುವುದು ಎಂಬ ಗೊಂದಲದಲ್ಲಿದ್ದಾರೆ. ಯಾರೋ ರೋಡ್ ನಲ್ಲಿ ಹೋಗುವವರು ನೇಮೋತ್ಸವ ಮಾಡ್ತೇವೆ ಅಂದ್ರೆ ಆಗುತ್ತಾ.? ಊರಿನವರು ಸೇವಾಸಮಿತಿ ಮಾಡಿ ನೇಮೋತ್ಸವ ಮಾಡೋದಕ್ಕೆ ನಮ್ಮ ತಕರಾರು ಇಲ್ಲ. ಆದ್ರೆ ಅವರಿಗೆ ಸೇವಾ ಸಮಿತಿ ಬೇಡ, ಆಡಳಿತ ಸಮಿತಿ ಬೇಕು ಎಂದು ಹೇಳಿದರು.
ಸಂಪ್ರದಾಯವನ್ನು ಬದಲಿಸುವ ಕೆಲಸ ಮಾಡ್ತಿದ್ದಾರೆ. ಈ ಹಿಂದೆಯೂ ಒಂದು ದಿನ ನೇಮೋತ್ಸವ ನಿಂತಿತ್ತು. ನಾವು ಕಾನೂನಿಗೆ ಬದ್ದರಾಗಿದ್ದೇವೆ. ನೇಮೋತ್ಸವ ನಿಂತಿರುವುದರಿಂದ ಊರಿನವರಿಗೆ ಸಮಸ್ಯೆ ಆಗಬಹುದೆಂಬ ಭಯವಿದೆ. ಆದ್ರೆ ಯಾರಿಂದಾಗಿ ನೇಮೋತ್ಸವ ನಿಂತಿದೆ ಅವರಿಗೆ ದೈವ ಶಿಕ್ಷೆ ನೀಡುತ್ತೆ ಎಂದರು.