ಮಂಗಳೂರು: ಶಿಲೆಕಲ್ಲು ಗಣಿಗಾರಿಕೆಗೆ ನಲುಗಿದ ತೆಂಕ ಕಜೆಕಾರು ಗ್ರಾಮದ ಜನರು, ಹೈಕೋರ್ಟ್ಗೆ ಮೊರೆ
ನಿಯಮಗಳನ್ನೆಲ್ಲ ಗಾಳಿಗೆ ತೂರಿ ಶಿಲೆಕಲ್ಲು ಗಣಿಗಾರಿಕೆ ಮಾಡುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ಗ್ರಾಮದ ಹಲವಾರು ಮನೆಗಳ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ತಳೀಯಾಡಳಿತ, ಸರ್ಕಾರ ತಮ್ಮ ಮೊರೆ ಕೇಳದ ಕಾರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
ಮಂಗಳೂರು, ನವೆಂಬರ್ 28: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಶಿಲೆಕಲ್ಲು ಗಣಿಗಾರಿಕೆ ಆರಂಭವಾಗಿದ್ದು, ಇದರಿಂದಾಗಿ ಎಂಟಕ್ಕೂ ಹೆಚ್ಚು ಮನೆಗಳು ಸಂಕಷ್ಟಕ್ಕೆ ಸಿಲುಕಿವೆ. ಗಣಿಗಾರಿಕೆ ಏನೋ ಸಕ್ರಮವಾಗಿದೆ. ಆದರೆ. ಕೆಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪವಿದೆ. ಗಣಿಗಾರಿಕೆ ನಡೆಸುವ ಸ್ಥಳದಿಂದ 500 ಮೀಟರ್ ದೂರದಲ್ಲಿ ಜನವಸತಿ ಪ್ರದೇಶ ಇರಬಾರದು. ಗಣಿಗಾರಿಕೆ ನಡೆಯುವ ಸ್ಥಳವನ್ನು ಮುಚ್ಚಬೇಕು. ಗಣಿಗಾರಿಕೆ ನಡೆಯುವ ಸುತ್ತ ಎಲ್ಲೂ ಅಂಗನವಾಡಿ/ಶಾಲೆ ಇರಬಾರದು ಎಂಬಿತ್ಯಾದಿ ನಿಯಮವಿದೆ. ಆದರೆ ಇಲ್ಲಿ ಗಣಿಗಾರಿಕೆ ನಡೆಯುವ ಕೂಗಳತೆ ದೂರದಲ್ಲೇ ಮನೆಗಳು, ಅಂಗನವಾಡಿ ಇದೆ. ಅಲ್ಲದೇ ಊರಿನಲ್ಲಿ ಗುಡ್ಡಕುಸಿತ ಕೂಡ ಆಗುತ್ತಿದೆ ಎನ್ನುವ ಆರೋಪವಿದೆ. ದಿನದ ಕೆಲವು ಬಾರಿ ಸ್ಟೋಟಕವನ್ನು ಬಳಸಿ ಶಿಲೆಕಲ್ಲನ್ನು ಸಿಡಿಸಲಾಗುತ್ತದೆ. ಈ ವೇಳೆ ಹೊರ ಬರುವ ಬಾರೀ ಸದ್ದು ನಿವಾಸಿಗಳಿಗೆ ನಡುಕ ಹುಟ್ಟಿಸಿದ್ರೆ, ವಾಸಿಸುವ ಮನೆಗಳು ಬಿರುಕು ಮೂಡುತ್ತಿದೆ. ಅಲ್ಲದೇ ದೂಳಿನ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯಲ್ಲಿ ಹೋಗುವಾಗ ಕಲ್ಲು ಬೀಳುವ ಭಯವಿದೆ. ಹೀಗೆ ಹತ್ತು ಹಲವು ಸಮಸ್ಯೆ ಊರವರನ್ನು ಕಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸದ್ಯ ಸಂತ್ರಸ್ತರೆಲ್ಲ ಒಟ್ಟು ಸೇರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಈ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಗಣಿ ಇಲಾಖೆ ಅಧಿಕಾರಿಗಳು,ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸೇರಿ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಗೆ ಮುಂದಾಗಿದ್ದಾರೆ.
