ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ: ನೋಡುತ್ತಾ ನಿಂತ ವಾಹನ ಸವಾರರು!
ಭಾರಿ ಗಾತ್ರದ ಕಾಡಾನೆಯೊಂದು ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ, ಈ ಜಾಗದಲ್ಲಿ ವಾಹನ ಸವಾರರು ಆನೆಯ ವಿಡಿಯೋ ಮಾಡುತ್ತಾ ನಿಲ್ಲುವುದು ಅಪಾಯಕ್ಕೆ ಆಹ್ವಾಮ ಮಾಡಿಕೊಡುವಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ವಾಹನ ಸವಾರರು ಮೈಮರೆತು ರಸ್ತೆಯಲ್ಲಿ ನಿಲ್ಲದಂತೆ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಏಕಾಏಕಿ ಬಂದ ಒಂಟಿ ಸಲಗವನ್ನು ನೋಡಲು ಕೆಲಕಾಲ ವಾಹನ ಸವಾರರು ಮತ್ತು ಮಾದಪ್ಪನ ಭಕ್ತರು ರಸ್ತೆಯಲ್ಲೇ ನಿಂತಿದ್ದಾರೆ. ಹನೂರಿನಿಂದ ರಾಮಾಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿದಿನವೂ ಒಂಟಿ ಸಲಗ ಸೇರಿದಂತೆ ಕೆಲ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸಾಮಾನ್ಯವಾಗಿದೆ. ಕಾಡಾನೆಗಳು ಪ್ರತಿದಿನ ನೀರು ಕುಡಿಯಲು ಈ ಭಾಗಕ್ಕೆ ಆಗಮಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ, ಆನೆಗಳನ್ನು ನೋಡಲು ವಾಹನ ಸವಾರರು ರಸ್ತೆಯಲ್ಲೇ ನಿಂತು ವಿಡಿಯೋ ತೆಗೆಯುತ್ತಿರುವುದು ಅಪಾಯಕಾರಿಯಾಗಿದೆ. ಸ್ವಲ್ಪ ಅಜಾಗರೂಕತೆ ನಡೆದರೂ ಬೈಕ್ ಸವಾರರು ಹಾಗೂ ಇತರ ವಾಹನ ಚಾಲಕರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಕಾಡಾನೆಗಳು ಏಕಾಏಕಿ ದಾಳಿ ಮಾಡುವ ಭೀತಿಯೂ ಇದ್ದು, ಅಪಘಾತ ಸಂಭವಿಸುವ ಆತಂಕವೂ ಹೆಚ್ಚಿದೆ.