“ಯಾರನ್ನು ಕೇಳಿ ನೀರು ಬಿಟ್ಟಿದ್ದೀರಾ?”: ಅಧಿಕಾರಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ; ಸಚಿವ ತಂಗಡಗಿ ಆಕ್ರೋಶ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಬಿಟ್ಟಿರುವ ವಿಚಾರಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಆದೇಶದ ಮೇಲೆ ನೀರು ಬಿಡಲಾಗಿದೆ ಎಂದು ಪ್ರಶ್ನಿಸಿರುವ ಸಚಿವರು, ಮುನಿರಾಬಾದ್‌ನ ನೀರಾವರಿ ಕಚೇರಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು, ಸ.29: ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತವಾಗಿ ನೀರು ಬಿಟ್ಟಿರುವ ಘಟನೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಯಾವ ಆದೇಶ ಇಟ್ಟುಕೊಂಡು ಕಾರ್ಖಾನೆಗಳಿಗೆ ನೀರು ಬಿಡಲಾಗಿದೆ ಎಂದು ಪ್ರಶ್ನಿಸಿರುವ ಸಚಿವರು, ಅಧಿಕಾರಿಗಳು ನೀಡುವ ಯಾವುದೇ ಅನಧಿಕೃತ ನೋಟಿಸ್‌ಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ಮುನಿರಾಬಾದ್‌ನಲ್ಲಿರುವ ನೀರಾವರಿ ವಲಯದ ಕಚೇರಿಯ ಅಧಿಕಾರಿಗಳು ಯಾವ ಆದೇಶದ ಮೇಲೆ ನೀರು ಬಿಡಲು ಮುಂದಾದರು ಎಂಬುದನ್ನು ವಿವರಿಸುವಂತೆ ಸೂಚಿಸಲಾಗಿದೆ. “ನನ್ನ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಇಂತಹ ಯಾವುದೇ ನಿರ್ಧಾರವಾಗಿಲ್ಲ. ರೈತರು ನನಗೆ ಮಾಹಿತಿ ನೀಡಿದ ತಕ್ಷಣವೇ ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಾರ್ಖಾನೆಗಳಿಗೆ ನೀರು ಬಿಡಲು ಅಧಿಕಾರ ಕೊಟ್ಟವರು ಯಾರು? ಇದಕ್ಕೆ ಅವರು ಉತ್ತರ ನೀಡಬೇಕು” ಎಂದು ಸಚಿವ ತಂಗಡಗಿ ಆಗ್ರಹಿಸಿದ್ದಾರೆ. ಈಗಾಗಲೇ ಎಂಡಿ ಅವರಿಗೆ ಮಾತನಾಡಿ ಶೋಕಾಸ್ ನೋಟಿಸ್ ಕೊಡಿಸುವ ಕೆಲಸ ಮಾಡಲಾಗಿದೆ ಎಂದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
