ಸ್ಪರ್ಧಾತ್ಮಕ ಪರಿಕ್ಷೆ ತೆಗೆದುಕೊಳ್ಳಲು ಬೇರೆಯವರ ಬಲವಂತಕ್ಕಿಂತ ನಿಮ್ಮೊಳಗಿನ ಪ್ರೇರೇಪಣೆ ಬಹಳ ಮುಖ್ಯ: ಬೆನಕ ಪ್ರಸಾದ, ಐಎಎಸ್ ಟಾಪರ್
ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಪ್ರಸಾದ್ ಅವರ ತಂದೆಯವರೇ ಐಎಎಸ್ ಪರೀಕ್ಷೆ ಬರೆಯಲು ಪ್ರೇರಣೆಯಾಗಿದ್ದರು ಆದರೆ ದುರದೃಷ್ಟವಶಾತ್ ತನ್ನ ಸಾಧನೆ ಹೇಳಿಕೊಳ್ಳಲು ಅವರಿಲ್ಲ ಎಂದು ವಿಷಾದದಿಂದ ಅವರು ಹೇಳುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತರ ಬೆಂಬಲವನ್ನೂ ಅವರು ನೆನೆಯುತ್ತಾರೆ.
Bengaluru: ಕೇಂದ್ರ ಲೋಕಸೇವಾ ಅಯೋಗ ನಡೆಸುವ ಐಎಎಸ್ (IAS) ಪರೀಕ್ಷೆಯಲ್ಲಿ ಈ ಬಾರಿ ಹೆಚ್ಚು ಕನ್ನಡಿಗರು ಪಾಸಾಗಿ ನಮ್ಮ ಅಭಿಮಾನಕ್ಕಾಗಿ ಕಾರಣರಾಗಿದ್ದಾರೆ. ವಿಡಿಯೋನಲ್ಲಿ ಕಾಣುತ್ತಿರುವ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಡಾ ಬೆನಕ ಪ್ರಸಾದ್ (Dr Benaka Prasad) ಅವರು ರಾಷ್ಟ್ರಕ್ಕೆ 92ನೇ ಱಂಕ್ ಗಿಟ್ಟಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಪ್ರಸಾದ 2018 ರಲ್ಲಿ ಎಮ್ ಬಿ ಬಿ ಎಸ್ ವ್ಯಾಸಂಗ ಮುಗಿಸಿದಾಗಿನಿಂದ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಮತ್ತು ಮೂರು ಬಾರಿ ಪರೀಕ್ಷೆ ಬರೆದಿದ್ದರೂ ಮೇನ್ಸ್ ನಲ್ಲಿ (Mains) ಇದು ಅವರ ಮೊದಲ ಪ್ರಯತ್ನವಾಗಿತ್ತು.
ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಪ್ರಸಾದ್ ಅವರ ತಂದೆಯವರೇ ಐಎಎಸ್ ಪರೀಕ್ಷೆ ಬರೆಯಲು ಪ್ರೇರಣೆಯಾಗಿದ್ದರು ಆದರೆ ದುರದೃಷ್ಟವಶಾತ್ ತನ್ನ ಸಾಧನೆ ಹೇಳಿಕೊಳ್ಳಲು ಅವರಿಲ್ಲ ಎಂದು ವಿಷಾದದಿಂದ ಅವರು ಹೇಳುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತರ ಬೆಂಬಲವನ್ನೂ ಅವರು ನೆನೆಯುತ್ತಾರೆ. ಯಾರದ್ದೋ ಬಲವಂತಕ್ಕೆ ಮಣಿದು ಐಎಎಸ್ ಅಥವಾ ಬೇರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಾರದು, ನಮ್ಮೊಳಗೆ ಅಂಥ ಪ್ರೇರೇಪಣೆ ಇರಬೇಕು ಅಂತ ಪ್ರಸಾದ ಹೇಳುತ್ತಾರೆ.
ಪರೀಕ್ಷೆಗೆ ತಯಾರಿ ನಡೆಸುವಾಗ ಐಸೋಲೇಟ್ ಮಾಡಿಕೊಂಡು ಓದುವುದು ಕಷ್ಟ ಎಂದು ಹೇಳುವ ಪ್ರಸಾದ ಆದರೆ ಸಿನಿಮಾ, ಟಿವಿ, ಫ್ರೆಂಡ್ಸ್ ಮೊದಲಾದ ಆಯಾಮಗಳಿಗೆ ನೀಡುವ ಸಮಯದಲ್ಲಿ ಕಡಿತಗೊಳಿಸಿಕೊಳ್ಳಬೇಕು ಎನ್ನುತ್ತಾರೆ.
ಬೆಂಗಳೂರಲ್ಲೇ ಈಗ ಸಾಕಷ್ಟು ಕೋಚಿಂಗ್ ಸೆಂಟರ್ಗಳು ತಲೆ ಎತ್ತಿರುವುದರಿಂದ ತಯಾರಿ ಮಾಡಿಕೊಳ್ಳುವುದು ಅಷ್ಟು ಕಷ್ಟವಲ್ಲ. ಯುಪಿಎಸ್ ಸಿ ಸಿಲಬಸ್ ಅನ್ನು ರಾಮಾಯಣ, ಮಹಾಭಾರತ ಮತ್ತು ಬೈಬಲ್ ಅಂತ ಪರಿಗಣಿಸಿ ಅದರ ಅನುಸಾರವೇ ಅಭ್ಯಾಸ ಮುಂದುವರೆಸಬೇಕು ಎಂದು ಪ್ರಸಾದ ಹೇಳುತ್ತಾರೆ.
ಗಂಟೆಗಟ್ಟಲೆ ಓದುತ್ತಾ ಹೆಚ್ಚು ಹೊತ್ತು ಅಭ್ಯಾಸದಲ್ಲಿ ಕಳೆಯುದಕ್ಕಿಂತ ಗುಣಮಟ್ಟದ ತಯಾರಿಗೆ ಒತ್ತು ನೀಡಬೇಕು ಎಂದು ಪ್ರಸಾದ ಹೇಳುತ್ತಾರೆ. ಹಾಗೆಯೇ, ಅವರು ವೃತ್ತಿಯಿಂದ ವೈದ್ಯರಾಗಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಡಾ ಬೆನಕ ಪ್ರಸಾದ ಹೇಳುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.