ಜೇನುಗೂಡಿಗೆ ಕಲ್ಲು ಎಸೆದ ಪರಿಣಾಮ ಹೆಜ್ಜೇನು ದಾಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊರಾರ್ಜಿ ಶಾಲೆಯ 21ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Edited By:

Updated on: Jun 09, 2026 | 6:58 PM

ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೆಜ್ಜೇನು ದಾಳಿ ನಡೆದು 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಆಟವಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಜೇನುಗೂಡಿಗೆ ಕಲ್ಲು ಎಸೆದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಗಳನ್ನು ಮುಂಡಗೋಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾರವಾರ, ಜೂ,9: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ಕಟ್ಟಡದ ಮೇಲೆ ಗೂಡು ಕಟ್ಟಿದ್ದ ಹೆಜ್ಜೇನುಗಳು ಒಮ್ಮೆಲೆ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಪರಿಣಾಮವಾಗಿ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಹಿತಿಯ ಪ್ರಕಾರ, ಇಂದು ಮಧ್ಯಾಹ್ನ ಸುಮಾರು 3:30 ರ ವೇಳೆಗೆ ಈ ಘಟನೆ ನಡೆದಿದೆ. ವಸತಿ ಶಾಲಾ ಕಟ್ಟಡದ ಎರಡನೇ ಮಹಡಿಯ ಮೇಲ್ಭಾಗದಲ್ಲಿ ದೊಡ್ಡದಾದ ಹೆಜ್ಜೇನು ಗೂಡು ಇತ್ತು. ಶಾಲೆಯ ಓರ್ವ ಆಟವಾಡುವ ಭರದಲ್ಲಿ ಆ ಜೇನುಗೂಡಿಗೆ ಭಾರವಾದ ಕಲ್ಲು ಎಸೆದಿದ್ದಾನೆ ಎನ್ನಲಾಗಿದೆ. ತಕ್ಷಣ ಜೇನುನೊಣಗಳ ಹಿಂಡು ಒಮ್ಮೆಲೆ ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದಿವೆ. ಜೇನುನೊಣಗಳು ಹಿಂಡುಹಿಂಡಾಗಿ ಬಂದು ಕಚ್ಚಲು ಆರಂಭಿಸುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿಗಳು ಕಿರುಚಾಡುತ್ತಾ ಓಡಿದ್ದಾರೆ. ಘಟನೆಯನ್ನು ಗಮನಿಸಿದ ಶಾಲೆಯ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಧಾವಿಸಿ ಬಂದು ಜೇನುನೊಣಗಳನ್ನು ಓಡಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಸದ್ಯ ಮುಂಡಗೋಡ ತಾಲೂಕು ಆಸ್ಪತ್ರೆಯ ವೈದ್ಯರ ತಂಡ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 09, 2026 06:57 PM
Follow Us
ಸೂರಜ್​, ಮಹಾವೀರ್​ ಉತ್ತರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More