New Year 2026: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಹದ್ದಿನಕಣ್ಣು
ಬೆಂಗಳೂರಿನಲ್ಲಿ 2026ರ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ 20,000ಕ್ಕೂ ಹೆಚ್ಚು ಪೊಲೀಸರು, ಸಿಸಿಟಿವಿ ಕ್ಯಾಮರಾಗಳೊಂದಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮತ್ತು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನಲ್ಲಿ 2026ರ ಹೊಸ ವರ್ಷಾಚರಣೆಗೆ ಭರ್ಜರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಹೊಸ ವರ್ಷಾಚರಣೆಯ ಕೌಂಟ್ ಡೌನ್ ಈಗಾಗಲೇ ಪ್ರಾರಂಭವಾಗಿದ್ದು, ಈ ಪ್ರದೇಶಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಚ್‌ಟವರ್‌ಗಳಿಂದ ನಿಗಾ ವಹಿಸಲಾಗುತ್ತಿದೆ.
ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಹೆಚ್ಚುವರಿ ಮಹಿಳಾ ಸಿಬ್ಬಂದಿ, ಸೇಫ್ಟಿ ಐಲ್ಯಾಂಡ್‌ಗಳು, ವುಮೆನ್ ಶೆಲ್ಟರ್‌ಗಳು ಮತ್ತು ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳು ಮತ್ತು 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಅವರು ಭದ್ರತಾ ಕ್ರಮಗಳನ್ನು ಪರಿಶೀಲಿಸಿದ್ದು, ಶಿಸ್ತುಬದ್ಧವಾಗಿ ಹೊಸ ವರ್ಷಾಚರಣೆ ಮಾಡಲು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
