ಜೈಲಿಗೆ ಹೋಗಿ ಬಂದಿರುವ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ವಿರುದ್ಧ ಅರೋಪ ಮಾಡಲು ನೈತಿಕತೆ ಇಲ್ಲ: ಡಾ ಅಶ್ವಥ್ ನಾರಾಯಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 04, 2022 | 5:13 PM

ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇವರು ನನ್ನ ವಿರುದ್ಧ ನಿರಾಧಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ನನ್ನಂಥ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವುದು ಖಂಡನೀಯ ಅಂತ ಸಚಿವರು ಹೇಳಿದರು.

Bengaluru: ಉನ್ನತ ಶಿಕ್ಷಣ ಮತ್ತು ರಾಮನಗರದ ಉಸ್ತುವಾರಿ ಸಚಿವರಾಗಿರುವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅದರಲ್ಲೂ ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ವಿರುದ್ಧ ಬೆಂಕಿಯುಗುಳಿದರು. ಪಿ ಎಸ್ ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಸಚಿವರ ಸಂಬಂಧಿ ಭಾಗಿಯಾಗಿದ್ದಾರೆ, ಸಚಿವರ ಪಾತ್ರವೂ ಇದೆ ಎಂದು ಶಿವಕುಮಾರ ಆರೋಪಿಸುತ್ತಿರುವುದು ಅವರನ್ನು ಕೆರಳಿಸಿದೆ. ವಿಧಾನ ಸೌಧದ ಅವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಅಶ್ವಥ್ ನಾರಾಯಣ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಜೊತೆಗೆ ಮಾನನಷ್ಟ ಮೊಕದ್ದಮೆಯನ್ನೂ ಹೂಡುವ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇವರು ನನ್ನ ವಿರುದ್ಧ ನಿರಾಧಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ನನ್ನಂಥ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವುದು ಖಂಡನೀಯ, ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಪಾಲುದಾರನಾಗಲು ನಾನೇನು ಆ ಖಾತೆಯ ಸಚಿವನೇ ಎಂದು ಅವರು ಕೇಳಿದರು,

ಪ್ರಗತಿಪರ ಧೋರಣೆಗಳ ನನ್ನ ಸಾರ್ವಜನಿಕ ಬದುಕು ಪಾರದರ್ಶಕವಾಗಿದೆ. ನನ್ನ ರಾಜಕೀಯ ಬದುಕು ಒಂದು ತೆರೆದ ಪುಸ್ತಕ, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ಉತ್ತಮವಾದ ರೀತಿಯಲ್ಲಿ, ಕಳಂಕರಹಿತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಡಾ ಅಶ್ವಥ್ ನಾರಾಯಣ ಹೇಳಿದರು.

ಜೈಲಿಗೆ ಹೋಗಿ ಬಂದಿರುವ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ವಿರುದ್ಧ ಅರೋಪ ಮಾಡಲು ನೈತಿಕತೆ ಅನ್ನೋದೇ ಇಲ್ಲ. ಅಸಲಿಗೆ ಅವರ ಪಕ್ಷವೇ ನಿರ್ನಾಮವಾಗುವ ಹಂತದಲ್ಲಿದೆ. ಬೇರೆಯವರ ವಿರುದ್ಧ ಸುಳ್ಳು ಅರೋಪಗಳನ್ನು ಮಾಡುವ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಆಶ್ವಥ್ ನಾರಾಯಣ ಹೇಳಿದರು.

ಇದನ್ನೂ ಓದಿ:   ಹೆಚ್ಡಿ ರೇವಣ್ಣಗೆ ಶಿಕ್ಷಣ ಎಂದರೆ ಏನೆಂದು ಗೊತ್ತಿಲ್ಲ; ತಮ್ಮ ಬಗ್ಗೆ ಟೀಕೆ ಮಾಡಿದ್ದ ರೇವಣ್ಣಗೆ ತಿರುಗೇಟು ಕೊಟ್ಟ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್