ಪಶ್ಚಿಮ ಬಂಗಾಳ: ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ

Updated on: May 09, 2026 | 11:54 AM

ಕೋಲ್ಕತ್ತಾದಲ್ಲಿ ನಡೆದ ಪಶ್ಚಿಮ ಬಂಗಾಳ ಮೊದಲ ಬಿಜೆಪಿ ಸರ್ಕಾರದ ಪಟ್ಟಾಭಿಷೇಕದ ವೇಳೆ ಪ್ರಧಾನಿ ಮೋದಿ ಅವರು 98 ವರ್ಷದ ಹಿರಿಯ ಬಿಜೆಪಿ ನಾಯಕ ಮಖನ್ ಲಾಲ್ ಸರ್ಕಾರ್ ಅವರ ಪಾದಕ್ಕೆ ನಮಸ್ಕರಿಸಿ ಗೌರವ ಸಲ್ಲಿಸಿದರು. ಕಾಶ್ಮೀರ ಚಳವಳಿಯ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿದ್ದ ಹಿರಿಯ ಜೀವಕ್ಕೆ ಮೋದಿ ನೀಡಿದ ಈ ಗೌರವದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ನಡೆದ ಬಿಜೆಪಿ ಸರ್ಕಾರದ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಗೌರವದ ನಡವಳಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲಿದ್ದ 98 ವರ್ಷದ ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರ ಕಾಲು ಮುಟ್ಟಿ ನಮಸ್ಕರಿಸಿದ ಪ್ರಧಾನಿ, ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಮಖನ್ ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿಯ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರು. ಸ್ವಾತಂತ್ರ್ಯಾನಂತರದ ರಾಷ್ಟ್ರೀಯತಾವಾದಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇವರು, 1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದರು.

1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ ಉತ್ತರ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿ, ಕೇವಲ ಒಂದು ವರ್ಷದಲ್ಲಿ 10,000ಕ್ಕೂ ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸತತ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸಮರ್ಪಣಾ ಮನೋಭಾವಕ್ಕೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us