PM Modi Poland Visit: ಪೋಲೆಂಡ್ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಉಕ್ರೇನ್​ಗೂ ಭೇಟಿ ನೀಡ್ತಾರೆ

PM Modi Poland Visit: ಪೋಲೆಂಡ್ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಉಕ್ರೇನ್​ಗೂ ಭೇಟಿ ನೀಡ್ತಾರೆ

ನಯನಾ ರಾಜೀವ್
|

Updated on: Aug 21, 2024 | 10:58 AM

ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಪೋಲೆಂಡ್‌ಗೆ ತೆರಳಿದ್ದಾರೆ. ಪೋಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ದುಡಾ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಪೋಲೆಂಡ್‌ನಿಂದ ನಾನು ಉಕ್ರೇನ್‌ಗೆ ಭೇಟಿ ನೀಡುತ್ತೇನೆ ಮತ್ತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಭೇಟಿ ಮಾಡಲಿದ್ದೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಪೋಲೆಂಡ್​ಗೆ ಪ್ರವಾಸ ಹೊರಟಿದ್ದಾರೆ. ಇದು ಕಳೆದ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ. ಪೋಲೆಂಡ್ ಜೊತೆಗಿನ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಸ್ಮರಿಸುವ ಸಲುವಾಗಿ ಪ್ರಧಾನಿಯವರ ಭೇಟಿ ನಡೆಯುತ್ತಿದೆ ಎಂಬುದು ತಿಳಿದುಬಂದಿದೆ..

ಪ್ರಧಾನಿ ಮೋದಿ ಉಕ್ರೇನ್​ನ ರಾಜಧಾನಿ ಕೀವ್​ಗೆ ಭೇಟಿ ನೀಡಲಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಉಕ್ರೇನ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಝೆಲೆನ್ಸ್ಕಿ ಅವರೊಂದಿಗೆ ಮಾತನಾಡುವುದಾಗಿ ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ.

ಮತ್ತಷ್ಟು ಓದಿ: PM Modi: ಇಂದಿನಿಂದ ಪೋಲೆಂಡ್‌, ಯುದ್ಧಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಏನು ಅಜೆಂಡಾ?

ಈ ಹಿಂದೆ ಯುಎಸ್ ಅಧ್ಯಕ್ಷ ಜೋ ಬೈಡನ್​ ಅವರಂತಹ ಜಾಗತಿಕ ನಾಯಕರು ಪ್ರಯಾಣಿಸಿದ್ದರು. ಫೆಬ್ರವರಿ 2022 ರಲ್ಲಿ ರಷ್ಯಾ ದೇಶವನ್ನು ಆಕ್ರಮಿಸಿದ ನಂತರ ಪ್ರಧಾನಿ ಮೋದಿ ಉಕ್ರೇನ್‌ಗೆ ನೀಡುವ ಮೊದಲ ಭೇಟಿ ಇದಾಗಿದೆ.

ಪ್ರಧಾನಿ ಮೋದಿ ಆಗಸ್ಟ್ 21-22 ರಂದು ಪೋಲೆಂಡ್‌ ಭೇಟಿ ನೀಡಿದ್ದು, ನಂತರ ಉಕ್ರೇನಿಯನ್ ರಾಷ್ಟ್ರೀಯ ದಿನವಾದ ಆಗಸ್ಟ್ 23 ರಂದು ಉಕ್ರೇನ್‌ನಲ್ಲಿರುತ್ತಾರೆ.

ರಷ್ಯಾದೊಂದಿಗಿನ ಸಂಘರ್ಷದ ನಂತರ ಮತ್ತು ಪ್ರಧಾನಿ ಮೋದಿ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಒಂದು ತಿಂಗಳ ನಂತರ ಇದೀಗ ಯುದ್ಧ ಪೀಡಿತ ದೇಶವಾದ ಉಕ್ರೇನ್​ಗೆ ಮೋದಿ ಮೊದಲ ಬಾರಿಗೆ ಪ್ರವಾಸ ಮಾಡಲಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ