Assam: ವಿಷಯುಕ್ತ ನೀರು ಸೇವನೆ ದಿಬ್ರುಗಢ್​ನ ಅಪರೂಪದ ತಳಿಯ ರಣಹದ್ದುಗಳಿಗೆ ಮಾರಣಾಂತಿಕವಾಯಿತೇ?

Assam: ವಿಷಯುಕ್ತ ನೀರು ಸೇವನೆ ದಿಬ್ರುಗಢ್​ನ ಅಪರೂಪದ ತಳಿಯ ರಣಹದ್ದುಗಳಿಗೆ ಮಾರಣಾಂತಿಕವಾಯಿತೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 15, 2023 | 8:08 AM

ಹದ್ದುಗಳ ಸಾವು ವಿಷಯುಕ್ತ ನೀರು ಸೇವನೆಯಿಂದ ಆಗಿದೆಯೋ ಅಥವಾ ಬೇರೆ ಯಾವುದಾದರೂ ಕಾರಣವಿರಬಹದೋ ಅನ್ನೋದಿನ್ನೂ ಖಚಿತಪಟ್ಟಿಲ್ಲ. ಆದರೆ ಅರಣ್ಯ ಇಲಾಖೆಯ ಪರಿಣಿತರ ತಂಡವೊಂದು ತನಿಖೆ ನಡೆಸುತ್ತಿದೆ.

ದಿಬ್ರುಗಢ್: ಅಸ್ಸಾಂ ದಿಬ್ರುಗಢ್ ನಗರದ ಹೊರವಲಯಲ್ಲಿ ಕಾಣಿಸುವ ಒಂದು ಅಪರೂಪ ತಳಿಯ ರಣಹದ್ದುಗಳು ಇದ್ದಕ್ಕಿದ್ದಂತೆ ಸಾಯಲಾರಂಭಿಸಿದ್ದು ಇದುವರೆಗೆ 20 ಪಕ್ಷಿಗಳು ಮರಣಿಸಿವೆ ಮತ್ತು 70 ಕ್ಕಿಂತ ಹೆಚ್ಚು ಅಸ್ವಸ್ಥತೆಯಿಂದ ಬಳಲುತ್ತಿವೆ. ಪಶುಗಳ ಸರ್ಜನ್ ಡಾ ಜುಗಲ್ ಚರಣ್ ಬರೂವಾ (Dr Jugal Charan Baruwah) ಹೇಳುವ ಹಾಗೆ ಏಳು ರಣಹದ್ದುಗಳು ಸತ್ತಿರುವುದು ಅವರ ಗಮನಕ್ಕೆ ಬಂದಿದೆ, ಏಳು ಹದ್ದುಗಳು ಚಿಂತಾಜನಕ ಸ್ಥಿತಿಯಲ್ಲಿವೆ ಮತ್ತು ಅಷ್ಟೇ ಸಂಖ್ಯೆಯ ಪಕ್ಷಿಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ 70 ರಣಹದ್ದುಗಳು ಅಸ್ವಸ್ಥತೆಯಿಂದ ಬಳಲುತ್ತಿವೆ ಮತ್ತು ಅವುಗಳಿಗೆ ಪಶುವೈದ್ಯಕೀಯ ತಂಡ ಚಿಕಿತ್ಸೆ ಒದಗಿಸುತ್ತಿದೆ ಎಂದು ಡಾ ಬರೂವಾ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ H3N2 ವೈರಸ್ ಆತಂಕ: ರೋಗಿಗಳಿಗೆ ಫ್ಲೂ ಜತೆಗೆ ಕಿವಿ ತುಂಬಿದಂಥಾ ಅನುಭವ; ಇದು ರೋಗ ಲಕ್ಷಣ ಎಂದ ವೈದ್ಯರು

‘ರಣಹದ್ದುಗಳು ಪ್ರಾಯಶಃ ಸತ್ತ ಹಸುವಿನ ದೇಹದ ಮಾಂಸ ತಿನ್ನಲು ಬಂದಿರಬಹುದು ಮತ್ತು ತಿಂದಾದ ಮೇಲೆ ಪಕ್ಕದಲ್ಲೇ ಹೊಂಡವೊಂದರ ನೀರು ಕುಡಿದಿವೆ. ಆದರೆ ಈ ಭಾಗಕ್ಕೆ ಪ್ರಾಣಿಗಳ ಬೇಟೆಗೆ ಬರುವ ಶಿಕಾರಿಗಳು ಹೊಂಡದ ನೀರಲ್ಲಿ ವಿಷ ಬೆರೆಸಿದ್ದರು, ನೀರು ಕುಡಿದ ಬಳಿಕ ಹದ್ದುಗಳು ಪ್ರಜ್ಞೆ ತಪ್ಪಿ ನೆಲಕ್ಕುರುಳಿವೆ. ನಾವು ಕೂಡಲೇ ಪೊಲೀಸರಿಗೆ ದೂರು ಸಲ್ಲಿಸಿದೆವು ಮತ್ತು ರಕ್ಷಣಾ ತಂಡವೊಂದು ಸಹ ಸ್ಥಳಕ್ಕೆ ಧಾವಿಸಿತು,’ ಎಂದು ಸ್ಥಳೀಯ ನಿವಾಸಿ ಪೂರ್ಣ ಜ್ಯೋತಿ ಗೊಹೇನ್ ಹೇಳುತ್ತಾರೆ.

ಹದ್ದುಗಳ ಸಾವು ವಿಷಯುಕ್ತ ನೀರು ಸೇವನೆಯಿಂದ ಆಗಿದೆಯೋ ಅಥವಾ ಬೇರೆ ಯಾವುದಾದರೂ ಕಾರಣವಿರಬಹದೋ ಅನ್ನೋದಿನ್ನೂ ಖಚಿತಪಟ್ಟಿಲ್ಲ. ಆದರೆ ಅರಣ್ಯ ಇಲಾಖೆಯ ಪರಿಣಿತರ ತಂಡವೊಂದು ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:  Karwar: ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಕರಾವಳಿಯ ಖಾಪ್ರಿ ಜಾತ್ರೆಗೆ ರಾಜ್ಯಗಳಿಂದಲೂ ಬರುತ್ತಾರೆ ಭಕ್ತರು! ಏನಿದರ ವಿದೇಶದ ನಂಟು?

‘ಅಸ್ವಸ್ಥ ರಣಹದ್ದುಗಳ ಸ್ಯಾಂಪಲ್ ಅನ್ನು ನಾವು ಸಂಗ್ರಹಿಸಿದ್ದೇವೆ. ಹಾಗೆಯೇ ಸತ್ತ ಹಸುವಿನ ಸ್ಯಾಂಪಲ್ ಸಹ ನಾವು ಕಲೆಕ್ಟ್ ಮಾಡಿದ್ದೇವೆ. ಯಾರೋ ನೀರಲ್ಲಿ ವಿಷ ಬೆರೆಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನೀರಿನ ಸ್ಯಾಂಪಲ್ ಕೂಡ ಸಂಗ್ರಹಿಸಿ ಪರೀಕ್ಷಣೆಗೆ ಕಳಿಸಲಾಗಿದೆ. ಸ್ಥಳೀಯರು ಆರೋಪಿಸಿರುವ ಹಾಗೆ ವಿಷಭರಿತ ನೀರು ಕುಡಿದ ಕಾರಣ ರಣಹದ್ದುಗಳು ಸತ್ತವೇ ಎಂಬ ಅಂಶವನ್ನು ನಾವು ತನಿಖೆ ಮಾಡುತ್ತಿದ್ದೇವೆ,’ ಎಂದು ವಲಯ ಅರಣ್ಯಾಧಿಕಾರಿ ಪಂಕಜ್ ಬೋರಾ ಹೇಳುತ್ತಾರೆ.

ಅಸ್ವಸ್ಥ ರಣಹದ್ದುಗಳ ಒಳಾಂಗಗಳ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗಳಿಗೆ ಕಳಿಸಲಾಗಿದೆ ಮತ್ತು ಸತ್ತ ಹದ್ದುಗಳ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ