ಪಕ್ಷದ ನಿರ್ದೇಶನ ಪಾಲಿಸುವುದು ಕಾರ್ಯಕರ್ತರ ಕರ್ತವ್ಯ: ಡಿಕೆಶಿಗೆ ಟಾಂಗ್ ಕೊಟ್ರಾ ಯತೀಂದ್ರ ಸಿದ್ದರಾಮಯ್ಯ?
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಅಧಿಕಾರ ಶಾಶ್ವತವಲ್ಲ. ಪಕ್ಷ ಸಂಘಟನೆ ಮತ್ತು ಪಕ್ಷದ ನಿರ್ದೇಶನಗಳನ್ನು ಪಾಲಿಸುವುದು ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಹೇಳಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ತಾವು ಸಾಮಾನ್ಯ ಕಾರ್ಯಕರ್ತ ಎಂದಿದ್ದಕ್ಕೆ ಯತೀಂದ್ರ ಟಾಂಗ್ ಕೊಟ್ಟರೇ ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು, ಡಿಸೆಂಬರ್ 26: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಅಧಿಕಾರ ಶಾಶ್ವತವಲ್ಲ. ಪಕ್ಷ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸಬೇಕಾದದ್ದು ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ನಾವೆಲ್ಲರೂ ಕೂಡ ಸಾಮಾನ್ಯ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಾಗಲಿ, ಪಕ್ಷವನ್ನು ಕಟ್ಟುವುದು ಮತ್ತು ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಈ ಹೇಳಿಕೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ‘ಸಾಮಾನ್ಯ ಕಾರ್ಯಕರ್ತ’ ಮತ್ತು ‘ಸುಮ್ನೆ ಭಾಷಣ ಮಾಡಿ ಹೋಗಿಲ್ಲ, ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ’ ಎಂಬ ಹೇಳಿಕೆಗೆ ತಿರುಗೇಟು ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಅವರ ನಿವಾಸದ ಹೊರಗಡೆ ಮಾತನಾಡಿದ್ದ ಡಿಕೆಶಿ, ‘ನಾನು ಈ ಪಕ್ಷವನ್ನು ಕಟ್ಟಿದ್ದೇನೆ, ಬಾವುಟ ಕಟ್ಟಿದ್ದೇನೆ, ಕಸವೂ ಗುಡಿಸಿದ್ದೇನೆ. ಕೇವಲ ಬಂದು ಭಾಷಣ ಮಾಡಿ ಹೋಗಿಲ್ಲ’ ಎಂದು ಹೇಳಿದ್ದರು. ಆ ಮೂಲಕ ಅಸಮಾಧಾನ ಹೊರಹಾಕಿದ್ದರು.
