ಶೆಟ್ಟರ್ ಬಿಜೆಪಿ ವಾಪಸ್ಸಾಗುವ ನಿರೀಕ್ಷೆ ಖಂಡಿತ ಇತ್ತು, ಬಿಜೆಪಿ ಜೊತೆ ಮಾತ್ರ ಅವರ ಡಿಎನ್ ಎ ಹೊಂದಿಕೆಯಾಗುತ್ತದೆ: ಬಸವರಾಜ ಬೊಮ್ಮಾಯಿ
ರಾಜ್ಯದ ಇಬ್ಬರು ಹಿರಿಯ ನಾಯಕರಾಗಿರುವ ಬಿಎಸ್ ಯಡಿಯೂರಪ್ಪ ಮತ್ತು ಹೆಚ್ ಡಿ ದೇವೇಗೌಡ ರಾಜಕೀಯದಲ್ಲಿ ಯಾವತ್ತೂ ನಿಷ್ಕ್ರಿಯರಾಗುವುದಿಲ್ಲ ದಿನದ 24 ಗಂಟೆಗಳ ಕಾಲ ಅವರು ರಾಜಕಾರಣದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ವಾಪಸ್ಸಾಗುವ ನಿರೀಕ್ಷೆ ಇತ್ತು, ಯಾಕೆಂದರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಅವರ ಮನಸ್ಸಿಗೆ ನೋವಾಗಿತ್ತು, ಕಾಂಗ್ರೆಸ್ ಸೇರಿದ್ದು ಅವರು ಅವೇಶದಲ್ಲಿ ತೆಗೆದುಕೊಂಡ ನಿರ್ಣಯವಾಗಿತ್ತು, ಹಾಗೆ ತೆಗೆದುಕೊಳ್ಳುವ ನಿರ್ಣಯಗಳು ಬಹಳ ದಿನ ಬಾಳಲಾರವು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಟಿವಿ9 ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಅವರು ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಅಲ್ಲಿನ ಪರಿಸರವನ್ನು ಅವರು ಕಂಡುಕೊಂಡರು, ಅವರ ಡಿಎನ್ಎ (DNA) ಬಿಜೆಪಿ ಜೊತೆ ಹೊಂದಾಣಿಕೆ ಆಗುತ್ತದೆಯೇ ಹೊರತು ಕಾಂಗ್ರೆಸ್ ಜೊತೆ ಅಲ್ಲ, ಎಂದರು. ಅವರನ್ನು ವಾಪಸ್ಸು ಕರೆತಂದಿದ್ದು ಕಳೆದುಕೊಂಡಿದ್ದ ಲಿಂಗಾಯತ ಸಮುದಾಯದ ವೋಟುಗಳನ್ನು ವಾಪಸ್ಸು ಪಡೆಯುವುದಕ್ಕಾಗಿಯೇ?
ಖಂಡಿತ ಅಲ್ಲ, ಬಿಜೆಪಿ ಒಂದು ಸಮುದಾಯಕ್ಕೆ ಸೇರಿದ ಪಕ್ಷವಲ್ಲ ಅದಕ್ಕೆ ಎಲ್ಲ ಸಮುದಾಯಗಳೂ ಬೇಕು, ಬಿಜೆಪಿ ವಿಶ್ವದ ಅತಿ ದೊಡ್ಡ ಪಾರ್ಟಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಿನೇದಿನೆ ಬಲಗೊಳ್ಳುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ಬಿಜೆಪಿ ಬಿಟ್ಟು ಹೋದವರು ಮಾತ್ರ ಅಲ್ಲ ಹಲವಾರು ಕಾಂಗ್ರೆಸ್ ನಾಯಕರು ಸಹ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ