ಮಂಗಳೂರಿನಲ್ಲಿ ಮಳೆ ನಿಂತರೂ ನಿಲ್ಲದ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಸಂಪರ್ಕ ಸಂಪೂರ್ಣ ಬಂದ್

| Updated By: ಗಣಪತಿ ಶರ್ಮ

Updated on: Jul 02, 2024 | 12:45 PM

ಮಂಗಳೂರು ನಗರದಾದ್ಯಂತ ಕಳೆ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ರಣಭೀಕರ ಮಳೆಯಿಂದಾಗಿ ಹಲವು ಅವಾಂತರಗಳೂ ಸೃಷ್ಟಿಯಾಗಿದೆ. ಇದೀಗ ಮಳೆ ಕೊಂಚ ಬಿಡುವು ಪಡೆದುಕೊಂಡರೂ ಬಂಗ್ರ ಕುಳೂರು ಬಳಿ ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ, ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ವಿಡಿಯೋ ಇಲ್ಲಿದೆ.

ಮಂಗಳೂರು, ಜುಲೈ 2: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇದೀಗ ಮಳೆ ನಿಂತರೂ ವರುಣಾರ್ಭಟದಿಂದ ಉಂಟಾದ ಅವಾಂತರಗಳು ನಿಂತಿಲ್ಲ. ನಗರದ ಕೊಟ್ಟಾರ ಬಳಿಯ ಬಂಗ್ರ ಕುಳೂರು ಬಳಿ ರಾಜಕಾಲುವೆಯ ತಡೆಗೋಡೆ ಕುಸಿದು ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ಬಂಗ್ರ ಕುಳೂರು ಭಾಗದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ರಾಜಕಾಲುವೆ ತಡೆಗೋಡೆ ಕುಸಿದ ಪರಿಣಾಮ ಡಾಮರು ರಸ್ತೆಯಲ್ಲಿ ಭಾರೀ ಬಿರುಕು ಸೃಷ್ಟಿಯಾಗಿದೆ. ರಸ್ತೆ ಬಿರುಕು ಬಿಟ್ಟು ಕ್ಷಣ ಕ್ಷಣಕ್ಕೂ ರಸ್ತೆಯಲ್ಲಿ ಮಣ್ಣು ಕುಸಿಯುತ್ತಿರುವ ಕಾರಣ ಸಂಚಾರ ಬಂದ್ ಮಾಡಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸದ್ಯ ಪರ್ಯಾಯ ಮಾರ್ಗದ ಮೂಲಕ ಖಾಸಗಿ ಜಾಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಕಂಬಗಳನ್ನು ಕೂಡ ಸ್ಥಳಾಂತರ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಮಳೆ ಮತ್ತಷ್ಟು ಸುರಿದರೆ ಸಂಪೂರ್ಣ ರಸ್ತೆ ರಾಜಕಾಲುವೆ ಪಾಲಾಗುವ ಆತಂಕ ಎದುರಾಗಿದೆ. ರಸ್ತೆ ಪಕ್ಕದ ಕೆಲ ಮನೆಗಳು ಕೂಡ ಅಪಾಯದಲ್ಲಿವೆ. 10 ಕ್ಕೂ ಹೆಚ್ಚು ಮನೆಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ರನ್​ವೇಯಿಂದ ಮನೆಗಳಿಗೆ ನುಗ್ಗುತ್ತಿದೆ ನೀರು! ಮಂಗಳೂರು ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿ ಸ್ಥಳೀಯರ ಪ್ರತಿಭಟನೆ

ಮಂಗಳೂರು ವಿಮಾನ ನಿಲ್ದಾಣದ ರನ್​​ವೇ ನೀರು ಕೆಂಜಾರು ಮತ್ತು ಕರಂಬಾರಿನ ಕೆಲವು ಮನೆಗಳಿಗೆ ನುಗ್ಗಿ ಭಾನುವಾರ ಹಾಗೂ ಸೋಮವಾರ ಅವಾಂತರ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ಸ್ಥಳೀಯರು ವಿಮಾನ ನಿಲ್ದಾಣ ಆಡಳಿತದ ವಿರುದ್ಧ, ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇದೀಗ ಬಂಗ್ರ ಕುಳೂರು ನಿವಾಸಿಗಳೂ ಸಂಕಷ್ಟಕ್ಕೀಡಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on