ಸೋಲರಿಯದ ಸರ್ದಾರನಾಗಿ ಟಗರು ಕಾಳಗದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದ ಬೆಟ್ಟದ ಹುಲಿ ಖ್ಯಾತಿಯ ಟಗರು ಇನ್ನಿಲ್ಲ
ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳಿಗೆ ಇರುವಂತೆ ಈ ಟಗರಿಗೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಟಗರಿನ ಅಂತ್ಯ ಸಂಸ್ಕಾರದಲ್ಲಿ ಸುತ್ತಮುತ್ತಲಿನ ಊರುಗಳ 500 ಕ್ಕೂ ಹೆಚ್ಚು ಜನ ಟಗರಿನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು
ಕೇವಲ ಕರ್ನಾಟಕ ಮಾತ್ರವಲ್ಲ, ರಾಜ್ಯದ ಹೊರಭಾಗದಲ್ಲಿ ನಡೆಯುವ ಟಗರು ಕಾಳಗಗಳಲ್ಲಿ ಜಯಭೇರಿ ಬಾರಿಸುತ್ತಿದ್ದ ಮತ್ತು ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಬೆಟ್ಟದ ಹುಲಿ ಎಂದು ಪ್ರಸಿದ್ಧಿಯಾಗಿದ್ದ ಟಗರು ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದೆ. ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನಲ್ಲಿರುವ ಕಲ್ಹಳ್ಳಿಯ ಪಾಂಡು ಗಣಿಗೆ ಅವರ ಮನೆ ಮಗನಂತಿದ್ದ ಟಗರು ಬುಧವಾರ ರಾತ್ರಿ ಅನಾರೋಗ್ಯದ ಕಾರಣ ಮರಣವನ್ನಪ್ಪಿದೆ. ಸ್ವಂತ ಮಗನನ್ನು ಕಳೆದುಕೊಂಡಂತೆ ರೋದಿಸುತ್ತಿರುವ ಪಾಂಡು ಅವರ ಕುಟುಂಬ ದುಃಖಸಾಗರದಲ್ಲಿ ಮುಳಗಿದೆ. ಈ ಟಗರು ಒಂದರ್ಥದಲ್ಲಿ ಸೋಲರಿಯದ ಸರದಾರ. ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ನಡೆಯುವ ಟಗರು ಕಾಳಗದಲ್ಲಿ ಗೆದ್ದ ಪ್ರಶಸ್ತಿಯೂ ಸೇರಿದಂತೆ 80 ಕ್ಕೂ ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಬೆಟ್ಟದ ಹುಲಿ ಟಗರಿನದ್ದು.
ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳಿಗೆ ಇರುವಂತೆ ಈ ಟಗರಿಗೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಟಗರಿನ ಅಂತ್ಯ ಸಂಸ್ಕಾರದಲ್ಲಿ ಸುತ್ತಮುತ್ತಲಿನ ಊರುಗಳ 500 ಕ್ಕೂ ಹೆಚ್ಚು ಜನ ಟಗರಿನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. ಕೆಲ ಊರುಗಳಲ್ಲಿ ಟಗರಿನ ಕಟೌಟ್ಗಳನ್ನು ಮಾಡಿ ಪ್ರಮುಖ ಸ್ಥಳಗಳಲ್ಲಿ ನೇತುಹಾಕಲಾಗಿದೆ ಎಂದು ಗೊತ್ತಾಗಿದೆ.
ಈ ವಿಡಿಯೋದ ಆರಂಭದಲ್ಲಿ ಬೆಟ್ಟದ ಹುಲಿ ಮುಂದೆ ಕೂತು ರೋದಿಸುತ್ತಿರುವವರೇ ಪಾಂಡು ಗಣಿಗೆ. ಐದು ವರ್ಷಗಳ ಹಿಂದೆ ಅವರು ಏಳು ಲಕ್ಷ ರೂಪಾಯಿಗೆ ಟಗರನ್ನು ಖರೀದಿಸಿದ್ದರಂತೆ. ಈ ಟಗರಿನಿಂದಾಗೇ ಅವರ ಹೆಸರು ಜಮಖಂಡಿ ತಾಲ್ಲೂಕಿನ ಜನರಿಗೆ ಗೊತ್ತಾಗಿತ್ತು ಎಂದರೆ ಉತ್ಪ್ರೇಕ್ಷೆ ಅನಿಸದು.
ಟಗರು ಕಾಳಗದ ವಿಷಯಕ್ಕೆ ಬಂದರೆ ಅದು ಅಪ್ರತಿಮ ದೈರ್ಯಶಾಲಿಯಾಗಿತ್ತಂತೆ. ಎದುರಾಳಿ ತನಗಿಂತ ಕಿರಿಯ ಮತ್ತು ಶಕ್ತಿಶಾಲಿಯಾಗಿದ್ದರೂ ಬೆಟ್ಟದ ಹುಲಿ ಧೃತಿಗೆಡದೆ ಅವುಗಳನ್ನು ಸಲೀಸಾಗಿ ಸೋಲಿಸುತಿತ್ತು ಅಂಥ ಗದ್ಗದಿತ ಧ್ವನಿಯಲ್ಲಿ ಪಾಂಡು ಹೇಳುತ್ತಾರೆ.
ಬೆಟ್ಟದ ಹುಲಿ ಟಗರಿನ ಆತ್ಮಕ್ಕೆ ಶಾಂತಿ ಸಿಗಲಿ.
ಇದನ್ನೂ ಓದಿ: ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ