Ravichandran: ಮಗಳ ಮದುವೆಗೆ ಸಹಾಯ ಮಾಡಿದ ಮೂವರು ಸ್ನೇಹಿತರ ಬಗ್ಗೆ ವೇದಿಕೆಯಲ್ಲಿ ರವಿಚಂದ್ರನ್ ಓಪನ್ ಮಾತು
Ravi Bopanna: ‘ಇಂಥ ಸ್ನೇಹಿತರು ಸಿಗೋದಕ್ಕೆ ಪುಣ್ಯ ಮಾಡಿರಬೇಕು’ ಎಂದು ರವಿಚಂದ್ರನ್ ಹೇಳಿದ್ದಾರೆ. ‘ರವಿ ಬೋಪಣ್ಣ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಒಂದಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ನಟ ರವಿಚಂದ್ರನ್ (Ravichandran) ಅವರು 2019ರ ಮೇ ತಿಂಗಳಲ್ಲಿ ಪುತ್ರಿ ಗೀತಾಂಜಲಿ (Ravichandran Daughter) ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಹಲವರಿಗೆ ತಿಳಿದಿರದ ಸಂಗತಿ ಏನೆಂದರೆ ಆ ಸಂದರ್ಭದಲ್ಲಿ ಅವರಿಗೆ ಹಣ ಕೊರತೆ ಉಂಟಾಗಿತ್ತು. ಆಗ ಸಹಾಯಕ್ಕೆ ಬಂದಿದ್ದೇ ಸ್ನೇಹಿತರು. ಆ ಘಟನೆಯನ್ನು ರವಿಚಂದ್ರನ್ ಈಗ ನೆನಪಿಸಿಕೊಂಡಿದ್ದಾರೆ. ‘ರವಿ ಬೋಪಣ್ಣ’ (Ravi Bopanna) ಸಿನಿಮಾ ಆಗಸ್ಟ್ 12ರಂದು ರಿಲೀಸ್ ಆಗುತ್ತಿದೆ. ಅದರ ಸಲುವಾಗಿ ಸೋಮವಾರ (ಆಗಸ್ಟ್ 8) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್ ಮಾತನಾಡಿದರು. ‘ನನ್ನ ಮಗಳ ಮದುವೆ ಸಮಯದಲ್ಲಿ ಚಿತ್ರರಂಗದ ಹೊರಗಿನ ಸ್ನೇಹಿತರು ಸಹಾಯ ಮಾಡಿದರು. ರಮೇಶ್, ವೆಂಕಟೇಶ್ ಸಾಕಷ್ಟು ಹಣ ನೀಡಿ ನನ್ನ ಬೆಂಬಲಕ್ಕೆ ನಿಂತರು. ಮತ್ತೋರ್ವ ಸ್ನೇಹಿತ ಸಜ್ಜನ್ ಅವರು ಆಭರಣ ಖರೀದಿಗೆ ಸಹಾಯ ಮಾಡಿದರು’ ಎಂದು ಸ್ನೇಹಿತರ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ ಕ್ರೇಜಿ ಸ್ಟಾರ್.