ಕೊಹ್ಲಿಯನ್ನು ಬಿಸಿಸಿಐ ಅವಹೇಳನಕಾರಿಯಾಗಿ ನಡೆಸಿಕೊಂಡಿದ್ದು 2021ರಲ್ಲಿ ಭಾರತೀಯ ಕ್ರಿಕೆಟ್​ನ ಕೆಟ್ಟ ಅಧ್ಯಾಯ

ವಿಶ್ವಕಪ್​ ನಂತರ ಈ ಕಿರು ಆವೃತ್ತಿಯ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದ ಕೊಹ್ಲಿಗೆ ಬಿಸಿಸಿಐ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳ ಆವೃತ್ತಿಯ ನಾಯಕತ್ವದಿಂದ ಅವಮಾನಕರ ರೀತಿಯಲ್ಲಿ ಕೆಳಗಿಳಿಸಿತು.

TV9kannada Web Team

| Edited By: Arun Belly

Dec 31, 2021 | 1:50 AM

ಕ್ರಿಕೆಟ್​ ಗೆ ಸಂಬಂಧಿಸಿದಂತೆ ಹೇಳುವುದಾದರೆ 2021 ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವಿನೊಂದಿಗೆ ಆಯಿತು. ಅದು ಮಹತ್ವದ ಸಾಧನೆಯೇ. ಆದರೆ ನಂತರ ನಡೆದ ಕೆಲವು ಘಟನೆಗಳು ಕ್ರಿಕೆಟ್​ ಪ್ರೇಮಿಗಳನ್ನು ನಿರಾಶೆಗೊಳಿಸಿದ್ದು ಸುಳ್ಳಲ್ಲ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ, ಟೀಮ್ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಮತ್ತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ನಾಯಕತ್ವ ಕುರಿತು ಉಂಟಾದ ಕಲಹ. ಟಿ20 ವಿಶ್ವಕಪ್​ ನಂತರ ಈ ಕಿರು ಆವೃತ್ತಿಯ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದ ಕೊಹ್ಲಿಗೆ ಬಿಸಿಸಿಐ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳ ಆವೃತ್ತಿಯ ನಾಯಕತ್ವದಿಂದ ಅವಮಾನಕರ ರೀತಿಯಲ್ಲಿ ಕೆಳಗಿಳಿಸಿತು. ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ನಂತರ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದರಾದರೂ ಕೊಹ್ಲಿಯ ಅಸಮಾಧಾನ, ಕೋಪ ಕಮ್ಮಿಯಾಗಲಿಲ್ಲ. ಅವರನ್ನು ಬಿಸಿಸಿಐ ಬಹಳ ಕೆಟ್ಟದ್ದಾಗಿ ನಡೆಸಿಕೊಂಡಿತು. ಈ ಕಾದಾಟ ಇನ್ನೂ ಕೊನೆಗೊಂಡಿಲ್ಲ, ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಮುಂದುವರಿಯಲಿದೆ.

ಕ್ರಿಕೆಟ್​ ಪ್ರೇಮಿಗಳಿಗೆ ನಿರಾಶೆ ಹುಟ್ಟಿಸಿದ ಇನ್ನೊಂದು ಸಂಗತಿಯೆಂದರೆ, ಟಿ20 ವಿಶ್ವಕಪ್​​​​ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಿದ್ದು ಮತ್ತು ನಾಕ್​ ಔಟ್​ ಹಂತವನ್ನೂ ತಲುಪದೆ ಟೂರ್ನಿಯಿಂದ ಹೊರಬಿದ್ದಿದ್ದು.

ಸೀಮಿತ ಓವರ್​​ಗಳ ಕ್ರಿಕೆಟ್ ಪಂದ್ಯಗಳಿಗೆ ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮ ಅವರನ್ನು ನಾಯಕನಾಗಿ ಬಿಸಿಸಿಐ ನೇಮಿಸಿತು. ರೋಹಿತ್ ನಾಯಕತ್ವದ ಟೀಮ್ ಇಂಡಿಯ ನ್ಯೂಜಿಲೆಂಡ್​ ವಿರುದ್ಧ ಟಿ20 ಪಂದ್ಯಗಳಳ ಸರಣಿಯನ್ನು ಗೆದ್ದಿತು.

ಕೆ ಎಲ್ ರಾಹುಲ್ 2021ರಲ್ಲಿ ಕನ್ನಡಿಗರಿಗೆ ಹೆಮ್ಮೆ ಉಂಟಾಗುವ ಸ್ಥಿತಿಯನ್ನು ನಿರ್ಮಿಸಿದರು. ಅವರನ್ನು ಮೊದಲಿಗೆ ವ್ಹೈಟ್​ ಬಾಲ್ ಕ್ರಿಕೆಟ್​ ಪಂದ್ಯಗಳಿಗೆ ಉಪನಾಯಕ ನೇಮಕ ಮಾಡಿದ ನಂತರ, ದಕ್ಷಿಣ ಪ್ರವಾಸಕ್ಕೆ ರೋಹಿತ್​ ಶರ್ಮ ಗಾಯದಿಂದಾಗಿ ಅಲಭ್ಯರಾದ ಕಾರಣ ರಾಹುಲ್ ಅವರನ್ನು ಟೆಸ್ಟ್​ ಪಂದ್ಯಗಳಿಗೂ ಉಪನಾಯಕನಾಗಿ ನಿಯುಕ್ತಿ ಮಾಡಲಾಯಿತು.

ಮತ್ತೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್​ ಸಹ ಕನ್ನಡಿಗರು ಸಂತೋಷ ಸಾಗರದಲ್ಲಿ ಮುಳುಗುವಂತೆ ಮಾಡಿದರು. ಟೀಮ್ ಇಂಡಿಯಾದ ಹೆಡ್​ ಕೋಚ್​ ಆಗಿದ್ದ ರವಿ ಶಾಸ್ತ್ರಿಯವರ ಅವಧಿ ಕೊನೆಗೊಂಡ ಬಳಿಕ ಅವರ ಸ್ಥಾನದಲ್ಲಿ ದ್ರಾವಿಡ್​​ ಅವರನ್ನು ನೇಮಕ ಮಾಡಲಾಗಿದೆ. ಶಿಸ್ತಿನ ಸಿಪಾಯಿ ಮತ್ತು ಭಾರತ ಕಂಡಿರುವ ಶ್ರೇಷ್ಠ ಬ್ಯಾಟರ್​​​​​​ಗಳಲ್ಲಿ ಒಬ್ಬರಾಗಿರುವ ದ್ರಾವಿಡ್​ ಅವರ ಮಾರ್ಗದರ್ಶನದಲ್ಲಿ ಭಾರತ ಗೆಲುವುಗಳನ್ನು ಕಾಣುತ್ತಿದೆ.

ರವಿಚಂದ್ರನ್ ಅಶ್ವಿನ್ ಅವರನ್ನು ಕೇವಲ ಟೆಸ್ಟ್​ ಪಂದ್ಯಗಳ ಸ್ಪೆಷಲಿಸ್ಟ್ ಪಟ್ಟ ಕಟ್ಟಿ ಸೀಮಿತ ಓವರ್​ಗಳು ಕ್ರಿಕೆಟ್​​​​​ ನಿಂದ ಹೊರಗಿಟ್ಟಿದ್ದ ಬಿಸಿಸಿಐ 2021 ರಲ್ಲಿ ಅವರಿಗೆ ಆಡುವ ಅವಕಾಶ ಕಲ್ಪಸಿತು. ತಾನು ಎಲ್ಲ ಫಾರ್ಮಾಟ್​​​​​ ಗಳಿಗೂ ಚಾಂಪಿಯನ್ ಬೌಲರ್ ಅನ್ನವುದನ್ನು ಅಶ್ವಿನ್ ಪ್ರೂವ್ ಮಾಡಿದರು.

ಭಾರತ ವಿಶ್ವ ಟೆಸ್ಟ್​​ ಚಾಂಪಿಯನ್ ಶಿಪ್​ ಫೈನಲ್​ ಪ್ರವೇಶಿಸಿದ್ದು ಕೂಡ 2021 ರಲ್ಲಿ ದೊಡ್ಡ ಸಾಧನೆ. ಆದರೆ ಫೈನಲ್ ನಲ್ಲಿ ನ್ಯೂಜಿಲೆಂಡ್​ ಗೆ ಸೋತು ಸೆಕೆಂಡ್​ ಬೆಸ್ಟ್ ಅನಿಸಿಕೊಳ್ಳಬೇಕಾಯಿತು.

ಈ ವರ್ಷವೂ ಕೊರೊನಾ ಮಹಾಮಾರಿ ಇಂಡಿಯನ್ ಪ್ರಿಮೀಯರ್ ಲೀಗ್ ಮೇಲೆ ತನ್ನ ಕರಾಳ ಛಾಯೆ ಬೀರಿದ್ದರಿಂದ ಟೂರ್ನಿಯನ್ನು ಆರ್ಧಕ್ಕೆ ಸ್ಥಗಿತಗೊಳಿಸಿ ನಂತರ ಅದನ್ನು ಯುಎಈಯಲ್ಲಿ ಪೂರ್ತಿಗೊಳಿಸಲಾಯಿತು.

ಐಪಿಎಲ್ 2021 ರ ಸೀಸನ್ ಗೆದ್ದ ಚೆನೈ ಸೂಪರ್​ ಕಿಂಗ್ಸ್​ ತಂಡ 4ನೇ ಬಾರಿಗೆ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡಿತು. ಕಳೆದ ಸೀಸನಲ್ಲಿ ಹೀನಾಯ ಪ್ರದರ್ಶನ ನೀಡಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್ ಹಂತ ತಲುಪಲು ವಿಫಲವಾಗಿತ್ತು.

ಭಾರತೀಯ ಕ್ರಿಕೆಟ್​ 2021ರಲ್ಲಿ ಹೀಗಿತ್ತು.

ಇದನ್ನೂ ಓದಿ:   Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್

Follow us on

Click on your DTH Provider to Add TV9 Kannada