ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್: ಖಾಸಗಿ ಬಸ್ಗಳಿಂದ ದುಪ್ಪಟ್ಟು ದರ ವಸೂಲಿ
ಮೂರು ದಿನಗಳ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟಾಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಸಿಕ್ಕಿದ್ದು, ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಬಸ್ ದರಗಳು ಭಾರೀ ಏರಿಕೆ ಕಂಡಿವೆ. ಹುಬ್ಬಳ್ಳಿ, ಕಾರವಾರ, ಕಲಬುರಗಿ, ಶಿವಮೊಗ್ಗ, ಮಂಗಳೂರಿಗೆ ತೆರಳುವ ಪ್ರಯಾಣಿಕರು ಹೆಚ್ಚಿದ ದರಕ್ಕೆ ಪರದಾಡುತ್ತಿದ್ದಾರೆ.
ಬೆಂಗಳೂರು, ಜನವರಿ 23: ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ದರಗಳು ಗಣನೀಯವಾಗಿ ಏರಿಕೆಯಾಗಿವೆ. ನಾಳೆ ನಾಲ್ಕನೇ ಶನಿವಾರ, ಭಾನುವಾರ ಮತ್ತು ಸೋಮವಾರ ಗಣರಾಜ್ಯೋತ್ಸವದ ಹಿನ್ನೆಲೆ ಸತತ ಮೂರು ದಿನಗಳ ರಜೆ ಇರುವುದರಿಂದ ಜನರು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಿಂದಿನ ದರ 1473 ರೂ ಇತ್ತು, ಈಗ ಅದು 5000 ರೂ ತಲುಪಿದೆ. ಬೆಂಗಳೂರು-ಕಾರವಾರ ನಡುವೆ ಪ್ರಸ್ತುತ 1790 ರೂಪಾಯಿಗಳಿಗಿಂತ ಅಧಿಕ ದರವಿದೆ. ಬೆಂಗಳೂರಿನಿಂದ ಕಲಬುರಗಿಗೆ 1299 ರೂಪಾಯಿಯಿಂದ 2200 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು-ಶಿವಮೊಗ್ಗ ಪ್ರಯಾಣ ದರ 599 ರೂಪಾಯಿಯಿಂದ ಸುಮಾರು 3000 ರೂ ಇದೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿಗೆ 909 ರೂಪಾಯಿಯಿಂದ 2299 ರೂಪಾಯಿಗೆ ದರ ಏರಿಕೆಯಾಗಿದೆ. ರಜೆಗೆ ತೆರಳುವವರು ಹೆಚ್ಚುವರಿ ದರ ನೀಡಿ ಊರುಗಳಿಗೆ ತೆರಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
