IPL 2025: 1 ರನ್‌ಗೆ 1.31 ಕೋಟಿ ರೂ ಸಂಭಾವನೆ..! 4ನೇ ಪಂದ್ಯದಲ್ಲೂ ಪಂತ್ ಫ್ಲಾಪ್
Rishabh Pant's IPL 2025 Struggle: 2025ರ ಐಪಿಎಲ್ ಹರಾಜಿನಲ್ಲಿ 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ ರಿಷಬ್ ಪಂತ್, ಈ ಸೀಸನ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಕೇವಲ 19 ರನ್ ಗಳಿಸಿದ್ದಾರೆ. ಅಂದರೆ ಪಂತ್ ಒಂದು ರನ್‌ಗೆ 1.31 ಕೋಟಿ ರೂಪಾಯಿ ಸಂಭಾವನೆ ಪಡೆದಂತ್ತಾಗಿದೆ.
2025 ರ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ ಸಂಭಾವನೆ ಪಡೆಯುವ ಮೂಲಕ ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರನೆಂಬ ದಾಖಲೆ ಬರೆದಿದ್ದರು. ಈ ದಾಖಲೆಯ ಮೊತ್ತದ ಜೊತೆಗೆ ಲಕ್ನೋ ತಂಡದ ನಾಯಕತ್ವವನ್ನು ಪಡೆದುಕೊಂಡಿದ್ದ ಪಂತ್ಗೆ ಆಟಗಾರನಾಗಿಯೂ ಹಾಗೂ ನಾಯಕನಾಗಿಯೂ ಈ ಸೀಸನ್ ಅಂದುಕೊಂಡಂತೆ ಸಾಗುತ್ತಿಲ್ಲ. ನಾಯಕನಾಗಿ ಸಿಹಿ ಕಹಿ ಅನುಭವ ಹೊಂದಿರುವ ಪಂತ್, ಆಟಗಾರನಾಗಿ ಅಟ್ಟರ್ ಫ್ಲಾಪ್ ಆಗಿದ್ದಾರೆ. ಸೀಸನ್ನ ಮೊದಲ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದ ಪಂತ್, ಆ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ರನ್ ಬಾರಿಸಿದ್ದರು. ನಂತರ ಪಂಜಾಬ್ ಕಿಂಗ್ಸ್ ವಿರುದ್ಧ 2 ರನ್ಗಳಿಗೆ ಸುಸ್ತಾಗಿದ್ದ ಪಂತ್ ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧವೂ 2 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ ಕೇವಲ 19 ರನ್ ಕಲೆಹಾಕಿರುವ ಪಂತ್, ಇದುವರೆಗೆ ಒಂದೊಂದು ರನ್ ಬಾರಿಸುವುದಕ್ಕೂ ಬರೋಬ್ಬರಿ 1.31 ಕೋಟಿ ರೂ. ಸಂಭಾವನೆ ಪಡೆದುಕೊಂಡಂತ್ತಾಗಿದೆ.