ಬಾಗಲಕೋಟೆಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಕೃಷ್ಣಾರತಿ ಸಂಭ್ರಮ

| Updated By: ವಿವೇಕ ಬಿರಾದಾರ

Updated on: Aug 27, 2024 | 12:12 PM

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕಾಶಿಯ ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿ ನೆರವೇರಿಯಿತು. ಕಾಶಿಯಿಂದ ಆಗಮಿಸಿದ ಆಚಾರ್ಯ ರಣದೀಪ, ಪಂಡಿತರಾದ ಅಮಿತ್ ಪಾಂಡೆ, ಸತ್ಯಂ ಮಿಶ್ರಾ, ಗೋವಿಂದ ತಿವಾರಿ ಸೇರಿದಂತೆ ಇತರರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ, ಬಳಿಕ ಆರತಿ ಮಾಡಿದರು.

ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೃಷ್ಣಾ ನದಿ (Krishna River) ತುಂಬಿ ಹಿರಿಯುತ್ತಿದೆ. ದೇಶದ ಅತಿದೊಡ್ಡ ನದಿಗಳಲ್ಲಿ ಒಂದಾದ ಕೃಷ್ಣಾ ನದಿಗೆ ಕೃಷ್ಣ ಜನ್ಮಾಷ್ಟಮಿ (Krishna Janmashtami) ದಿನದಂದು ಕೃಷ್ಣೆಗೆ ಆರತಿ ಮಾಡಲಾಯಿತು. ಕಾಶಿಯ ಗಂಗಾರತಿ ಮಾದರಿಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕೃಷ್ಣಾರತಿ ನೆರವೇರಿಸಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಂಗಮೇಶ್ ನಿರಾಣಿ ಅವರ ನೇತೃತ್ವದಲ್ಲಿ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿ ದಡದಲ್ಲಿ ಕೃಷ್ಣಾರತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಶಿಯಿಂದ ಆಗಮಿಸಿದ ಆಚಾರ್ಯ ರಣದೀಪ, ಪಂಡಿತರಾದ ಅಮಿತ್ ಪಾಂಡೆ, ಸತ್ಯಂ ಮಿಶ್ರಾ, ಗೋವಿಂದ ತಿವಾರಿ ಸೇರಿದಂತೆ ಇತರರು ಮೊದಲಿಗೆ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದರು. ನಂತರ ಶಂಖನಾದ ಮೊಳಗಿಸಿದರು. ಬಳಿಕ ದೂಪ, ದೀಪಗಳಿಂದ ಕೃಷ್ಣಾ ನದಿಗೆ ಆರತಿ ಮಾಡಿದರು.

ಕೃಷ್ಣಾರತಿ ಕಾರ್ಯಕ್ರಮದಲ್ಲಿ ಪಂಚಮಸಾಲಿ ಮೂರನೇ ಪೀಠಾಧ್ಯಕ್ಷ ಮಹದೇವ ಶಿವಾಚಾರ್ಯ, ಹುಕ್ಕೇರಿ ಹಿರೆಮಠದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಬಾಗಿಯಾಗಿದ್ದರು. ಬಾಗಲಕೋಟೆ ಉಸ್ತುವಾರಿ ಸಚಿವ ಆರ್​.ಬಿ ತಿಮ್ಮಾಪುರ ತೇರದಾಳ, ಶಾಸಕ ಸಿದ್ದು ಸವದಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಸಹಸ್ರಾರು ಜನರು ಕೃಷ್ಣಾರತಿ ವೀಕ್ಷಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ