ಉಪಚುನಾವಣೆ: ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ!

| Updated By: ರಮೇಶ್ ಬಿ. ಜವಳಗೇರಾ

Updated on: Oct 30, 2024 | 10:54 PM

ಸಂಡೂರು ಉಪ ಚುನಾವಣೆ ರಂಗೇರಿದ್ದು, ಈ ಸಲವಾದರೂ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಬಿಜೆಪಿ ಕಸರತ್ತು ನಡೆಸಿದೆ. ಅದರಂತೆ ಇಂದು ಶ್ರೀರಾಮುಲು ಜನಾರ್ದನ ರೆಡ್ಡಿ ಅಬ್ಬರದ ಪ್ರಚಾರ ನಡೆಸಿದ್ದು, ಕುಡತಿನಿಯಲ್ಲಿ ಭಾಷಣ ಮಾಡುತ್ತಿರುವಾಗ ಜನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿ(ಅ.30): ಸಂಡೂರು ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಏತನ್ಮಧ್ಯೆ ಉಪಚುನಾವಣೆಯ ಪ್ರಚಾರಕ್ಕೆ ಹೋದ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಜನರು ತರಾಟೆಗೆ ತೆಗೆದುಕೊಂಡ ಘಟನೆ ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡತಿನಿಯಲ್ಲಿ ಇಂದು(ಬುಧವಾರ) ನಡೆದಿದೆ. ಭೂಮಿ ಕಳೆದುಕೊಂಡ ರೈತರಿಗಿನ್ನು ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ. ಹದಿನಾಲ್ಕು ವರ್ಷದ ಹಿಂದೆ ಭೂಮಿ ನೀಡಿದ್ರೂ ಕಂಪನಿ ಪ್ರಾರಂಭ ಮಾಡಿಲ್ಲ. ಹೀಗಾಗಿ ಭೂಮಿ ವಾಪಸ್ ಮಾಡಿ ಇಲ್ಲವಾದರೆ ಕಂಪನಿ ಪ್ರಾರಂಭಿಸಿ ಎಂದ ಜನರು ಉಭಯ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡುವಾಗ ಭಾಷಣ ನಿಲ್ಲಿಸಿ ಎಂದು ಜನರು ಕೂಗಾಡಿದ್ದಾರೆ. ಭಾಷಣ ನಿಲ್ಲಿಸಿ ಎಂದಾಗ ನಿಮ್ಮೆಲ್ಲರ ನೋವು ಅರ್ಥವಾಗಿದೆ ಎಂದು ಜನಾರ್ದನ ರೆಡ್ಡಿ ಸಮಾಜಾಯಿಷಿ ನೀಡಲು ಮುಂದಾಗಿದ್ದರು. ಈ ವೇಳೆ ಸುಮ್ಮನಾಗದೇ ಜನರು ಕೂಗಾಡಿದ್ದಾರೆ. ಒಂದಿಬ್ಬರು ಕುಡಿದು ಮಾತನಾಡುತ್ತಿದ್ದಾರೆ. ಪೊಲೀಸರು ಇವರನ್ನು ಕಳಿಸಿ ಎಂದು ಜನಾರ್ದನ ರೆಡ್ಡಿ ಗದರಿದ್ದಾರೆ. ಆಗ ಮತ್ತಷ್ಟು ಕೆರಳಿದ ಜನರು ಮತ್ತಷ್ಟು ಜೋರಾಗಿ ಕೂಗಾಡಿದ್ದಾರೆ. ಕೊನೆಗೂ ಭಾಷಣ ಮುಗಿಸಿ ರೆಡ್ಡಿ, ರಾಮುಲು ವಾಪಾಸ್ ಹೋಗಿದ್ದಾರೆ.

Follow us on