‘ಶಿವಮೊಗ್ಗದ ಜನರು ಬದಲಾವಣೆ ಬಯಸಿದ್ದಾರೆ’: ಗೀತಾ ನಾಮಪತ್ರ ಸಲ್ಲಿಕೆ ಬಳಿಕ ಶಿವಣ್ಣ ಪ್ರತಿಕ್ರಿಯೆ
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅವರ ಪರವಾಗಿ ಶಿವರಾಜ್ಕುಮಾರ್ ಪ್ರಚಾರ ಮಾಡುತ್ತಿದ್ದಾರೆ. ಗೀತಾ ನಾಮಪತ್ರ ಸಲ್ಲಿಸಿದ ಬಳಿಕ ಶಿವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದ ಜನರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇಂದು (ಏಪ್ರಿಲ್ 15) ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ (DK Shivakumar), ಕಿಮ್ಮನೆ ರತ್ನಾಕರ್ ಮುಂತಾದವರು ಗೀತಾಗೆ ಸಾಥ್ ನೀಡಿದ್ದಾರೆ. ಗೀತಾ ಪರವಾಗಿ ಅವರ ಪತಿ ಶಿವರಾಜ್ಕುಮಾರ್ ಅವರು ಜಿಲ್ಲೆಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಗೀತಾ ನಾಮಪತ್ರ ಸಲ್ಲಿಸಿದ ಬಳಿಕ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ಶಿವಮೊಗ್ಗದ ಜನತೆಗೆ ಧನ್ಯವಾದಗಳು. ನಾಮಪತ್ರ ಸಲ್ಲಿಸುವಾಗ ಇಷ್ಟೊಂದು ಜನರು ಪ್ರೀತಿ-ವಿಶ್ವಾಸದಿಂದ ಬಂದಿರುವುದು ನೋಡಿದರೆ ಒಂದು ಬದಲಾವಣೆ ಬೇಕು ಅಂತ ಅವರೆಲ್ಲರೂ ಬಯಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಜನರ ಮುಖದಲ್ಲಿ ನಗು ಇತ್ತು. ಅದರ ಮೂಲಕ ಬದಲಾವಣೆ ಕೇಳುತ್ತಿದ್ದಾರೆ ಎಂಬುದು ನನ್ನ ಭಾವನೆ. ನಿಮ್ಮಲ್ಲರ ಆಶೀರ್ವಾದ ಬೇಕು. ಗೀತಾ ಖಂಡಿತಾ ಗೆಲ್ಲುತ್ತಾರೆ’ ಎಂದು ಶಿವರಾಜ್ಕುಮಾರ್ (Shivarajkumar) ಹೇಳಿದ್ದಾರೆ. ‘ಇಂದು ನಾನು ನಾಮಪತ್ರ ಸಲ್ಲಿಸಿ ಬಂದಿದ್ದೇನೆ. ನಮ್ಮ ಪಕ್ಷದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಎಲ್ಲ ಕಾರ್ಯಕರ್ತರಿಗೆ ನನ್ನ ನಮಸ್ಕಾರ. ಮತದಾರರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅವರೆಲ್ಲರ ಆಶೀರ್ವಾದ ನಮ್ಮ ಪಕ್ಷ ಮತ್ತು ನನ್ನ ಮೇಲೆ ಇರಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಗೀತಾ ಶಿವರಾಜ್ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.