“ನಿನ್ನ ಮೇಲೆ ಬಹಳ ದೂರುಗಳಿವೆ”: ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ

Edited By:

Updated on: Sep 22, 2026 | 2:46 PM

ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ತಮ್ಮ ಕಾರನ್ನು ತೆಗೆಸಿದ ವಿಚಾರಕ್ಕೆ ಭದ್ರತಾ ಉಸ್ತುವಾರಿ ಡಿಸಿಪಿ ಯೋಗೇಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದ್ದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, ಸಾರ್ವಜನಿಕವಾಗಿ ಡಿಸಿಪಿಯನ್ನು ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳೊಂದಿಗೆ ಡಿಸಿಪಿ ವರ್ತನೆ ಬಗ್ಗೆ ಹಲವು ದೂರುಗಳಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಬೆಂಗಳೂರು, ಸೆ.22: ವಿಧಾನಸಭೆ ಕಲಾಪ ಮುಗಿಸಿ ವಿಧಾನಸೌಧದಿಂದ ಹೊರಡುತ್ತಿದ್ದ ವೇಳೆ, ತಮ್ಮ ಕಾರನ್ನು ಅಲ್ಲಿಂದ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಭದ್ರತಾ ಉಸ್ತುವಾರಿ ಡಿಸಿಪಿ ಯೋಗೇಶ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕಲಾಪ ಮುಗಿಸಿ ಕಾವೇರಿ ನಿವಾಸಕ್ಕೆ ತೆರಳಲು ಸಿದ್ದರಾಮಯ್ಯ ಅವರು ಪಶ್ಚಿಮ ದ್ವಾರದ (ಕೆಂಗಲ್ ಹನುಮಂತಯ್ಯ ಗೇಟ್) ಮೆಟ್ಟಿಲುಗಳನ್ನು ಇಳಿದು ಹೊರಬಂದಾಗ, ಅವರ ಕಾರು ಅಲ್ಲಿ ಇರಲಿಲ್ಲ. ವಿಚಾರಿಸಿದಾಗ ಡಿಸಿಪಿ ಯೋಗೇಶ್ ಅವರ ಸೂಚನೆಯಂತೆ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಿರುವುದು ತಿಳಿದುಬಂದಿದೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾರಿಗಾಗಿ ಕೆಲ ಕಾಲ ಕಾಯಬೇಕಾಗಿ ಬಂದಿದ್ದರಿಂದ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನಗೊಂಡರು. ತಕ್ಷಣವೇ ಸ್ಥಳದಲ್ಲಿದ್ದ ಡಿಸಿಪಿ ಯೋಗೇಶ್ ಅವರನ್ನು ಹತ್ತಿರ ಕರೆದ ಸಿದ್ದರಾಮಯ್ಯ, ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. “ನನ್ನ ಕಾರನ್ನು ಇಲ್ಲಿಂದ ಯಾಕೆ ತೆಗೆಸಿದೆ?” ಎಂದು ನೇರವಾಗಿಯೇ ಪ್ರಶ್ನಿಸಿದ ಸಿದ್ದರಾಮಯ್ಯ, ಅಧಿಕಾರಿಗಳ ನಡವಳಿಕೆಯ ಬಗ್ಗೆ ಎಚ್ಚರಿಕೆ ನೀಡಿದರು. “ನಿನ್ನ ಮೇಲೆ ಬಹಳ ಆರೋಪಗಳಿವೆ. ವಿಧಾನಸೌಧಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಶಾಸಕರನ್ನು ನೀನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಸಾಲು ಸಾಲು ದೂರುಗಳು ಬಂದಿವೆ” ಎಂದು ನೇರವಾಗಿಯೇ ಗರಂ ಆದರು. “ಜನಪ್ರತಿನಿಧಿಗಳ ಜೊತೆ ನಡೆದುಕೊಳ್ಳುವ ರೀತಿ ಇದಲ್ಲ. ಇನ್ಮುಂದೆ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದು ಡಿಸಿಪಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದರು. ಇಡೀ ಘಟನೆಯಿಂದಾಗಿ ಕೆಲ ಕಾಲ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತದನಂತರ ಕಾರು ಸ್ಥಳಕ್ಕೆ ಆಗಮಿಸಿದ ಬಳಿಕ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದತ್ತ ಪ್ರಯಾಣ ಬೆಳೆಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More