ಸೌಜನ್ಯ ಕೊಲೆ ಕೇಸ್: ಎಸ್ಐಟಿಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಮುಖ್ಯಾಂಶಗಳು
- ಸೌಜನ್ಯ ಕೊಲೆ ಪ್ರಕರಣ
- ಎಸ್‌ಐಟಿ ಅಧಿಕಾರಿಗೆ ಮುಚ್ಚಿದ ಲಕೋಟೆ ಕೊಟ್ಟ ಸಾಮಾಜಿಕ ಹೋರಾಟಗಾರ ಟಿ.ಜಯಂತ್
- ಒಂದಿಷ್ಟು ಜನರ ಹೆಸರನ್ನು ಕೊಟ್ಟಿದ್ದೇನೆ ಎಂದ ಟಿ.ಜಯಂತ್
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ, ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು ವಿಶೇಷ ತನಿಖಾ ದಳಕ್ಕೆ ಮುಚ್ಚಿದ ಲಕೋಟೆಯಲ್ಲಿ ಪ್ರಮುಖ ಮಾಹಿತಿ ಸಲ್ಲಿಸಿದ್ದಾರೆ. ಈ ಲಕೋಟೆಯಲ್ಲಿ ಪ್ರಕರಣದ ಬಗ್ಗೆ ತಿಳಿದಿರುವ ವ್ಯಕ್ತಿಗಳ ಮಾಹಿತಿ ಇದ್ದು, ಅವರು ಸಾಕ್ಷಿಗಳಾಗಬಹುದು ಅಥವಾ ಆರೋಪಿಗಳಾಗಬಹುದು ಎಂದು ಜಯಂತ್ ಹೇಳಿದ್ದಾರೆ.
ಮಂಗಳೂರು, ಅಕ್ಟೋಬರ್ 10: ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್‌ಐಟಿ ನಡೆಸಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಜಯಂತ್ ಟಿ, ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದು, ಮುಚ್ಚಿದ ಲಕೋಟೆಯೊಂದನ್ನು ನೀಡಿದ್ದಾರೆ. ಎಸ್‌ಐಟಿ ಕಚೇರಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಇಲ್ಲದ ಕಾರಣ, ಪೊಲೀಸ್ ಕಮಿಷನರ್ ಕಚೇರಿಗೆ ಬಂದು ಲಕೋಟೆ ನೀಡಿದ್ದಾರೆ. ಆ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಅವರು, ‘ಮುಚ್ಚಿದ ಲಕೋಟೆಯಲ್ಲಿ ಒಂದಿಷ್ಟು ಜನರ ಹೆಸರನ್ನು ಕೊಟ್ಟಿದ್ದೇನೆ. ಅವರಿಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಮಾಹಿತಿ ಇದೆ. ಅವರು ಕೂಡ ಅದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಅವರನ್ನು ಸಾಕ್ಷಿ ಅಥವಾ ಆರೋಪಿಯನ್ನಾಗಿಸಿ ವಿಚಾರಣೆ ಮಾಡಬಹುದು. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಗೆ ಲಕೋಟೆ ಕೊಟ್ಟು ಅವರಿಗೆ ವಿಷಯ ತಿಳಿಸಿದ್ದೇನೆ. ಅವರನ್ನೆಲ್ಲಾ ಈ ಹಿಂದೆ ಪೊಲೀಸರು, ಸಿಐಡಿ, ಸಿಬಿಐ ತನಿಖೆ ಮಾಡಿಲ್ಲ ಹಾಗಾಗಿ ಅವರ ತನಿಖೆ ಮಾಡಿದರೆ ಸತ್ಯ ಹೊರಬರುತ್ತೆ’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
