ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಯತೀಂದ್ರ ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಆರೋಪಿಯ ಮೊಬೈಲ್ ನೆಟ್‌ವರ್ಕ್ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಯಲ್ಲಿ ಪತ್ತೆಯಾಗಿರುವುದಾಗಿ ಹೇಳಿದ್ದಾರೆ. ತನಿಖೆ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದ ಅವರು, ಸ್ಟಿಂಗ್ ಆಪರೇಷನ್ ಮಾಡಿದವರು ಮತ್ತು ಅದನ್ನು ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು, ನವೆಂಬರ್ 7: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯೊಬ್ಬರ ಮೊಬೈಲ್ ನೆಟ್‌ವರ್ಕ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪೊಲೀಸ್ ಕಮಿಷನರ್ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ಈ ವೀಡಿಯೊವನ್ನು ಅಪ್‌ಲೋಡ್ ಮಾಡಿಸಿದವರ ಮೊಬೈಲ್ ಕುಮಾರಸ್ವಾಮಿ ಅವರ ಮನೆಯಲ್ಲಿ ಟ್ರೇಸ್ ಆಗಿದೆ ಎಂದು ಯತೀಂದ್ರ ಉಲ್ಲೇಖಿಸಿದ್ದಾರೆ.
‘ಸರ್ಕಾರದ ಮೇಲೆ ನನಗೆ ನಂಬಿಕೆ ಇದೆ. ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಯತೀಂದ್ರ ಭರವಸೆ ವ್ಯಕ್ತಪಡಿಸಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಿದವರು ಮತ್ತು ಅದನ್ನು ಬೇಕು ಬೇಕು ಎಂದು ಹರಡಿ ತೇಜೋವಧೆ ಮಾಡಲು ಪ್ರಯತ್ನಿಸಿದವರ ಮೇಲೂ ಕ್ರಮ ಆಗಬೇಕು ಎಂದು ಯತೀಂದ್ರ ಒತ್ತಾಯಿಸಿದ್ದಾರೆ. ಯಾವುದೇ ರಾಜಕಾರಣಿಯ ಮೇಲೆ ಆರೋಪ ಬಂದಾಗ ಅದು ರಾಜಕೀಯಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

