ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ: ದಾಖಲಾಯ್ತು ದೂರು
ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಧನಂಜಯ್ ಅವರು ಪ್ರಭಾವ ಬಳಸಿ ತಮ್ಮ ವರ್ಗಾವಣೆ ಆದೇಶವನ್ನು ಒಂದೇ ದಿನದಲ್ಲಿ ರದ್ದುಪಡಿಸಿ ಅದೇ ಠಾಣೆಯಲ್ಲಿ ಮುಂದುವರೆದಿದ್ದಾರೆ ಎಂದು ಆರೋಪಿಸಲಾಗಿದೆ. ಸಮಾಜದಲ್ಲಿ ಅಶಾಂತಿ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವಂತಹ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ.
ಮೈಸೂರು, ಸೆಪ್ಟೆಂಬರ್ 22: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿವಾದದಿಂದ ಸುದ್ದಿಯಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ವರ್ಗಾವಣೆ ಆದೇಶವನ್ನು ರದ್ದುಪಡಿಸಲು ಧನಂಜಯ್ ಅವರು ಪ್ರಭಾವ ಬಳಸಿದ್ದಾರೆ ಎಂಬುದು ದೂರಿನ ಪ್ರಮುಖ ಅಂಶವಾಗಿದೆ. ವರ್ಗಾವಣೆ ಆದೇಶವನ್ನು ಒಂದೇ ದಿನದಲ್ಲಿ ರದ್ದುಗೊಳಿಸಿ, ಅದೇ ಠಾಣೆಯಲ್ಲಿ ಮುಂದುವರೆದಿರುವ ಬಗ್ಗೆ ಆರೋಪಿಸಲಾಗಿದೆ. ಈ ಹಿಂದೆ ಗಣಪತಿ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿ ಹಾಕಿರುವ ಆಕ್ಷೇಪಗಳು ಕೇಳಿ ಬಂದಿದ್ದು ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಈಗ ಸ್ನೇಹಮಯಿ ದೂರಿನಲ್ಲಿ ಕೂಡ, ಇನ್ಸ್‌ಪೆಕ್ಟರ್ ಧನಂಜಯ್ ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
