ಕೊಲ್ಕತ್ತಾದಲ್ಲಿ ವಾಸವಾಗಿದ್ದ ನಾಗಣ್ಣನಿಗೆ ದೂರದ ಮುಂಬೈನಿಂದ ಮೆಸೇಜು ಬಂತು. ಪಂಚಮಿಗೆ ಊರಿಗೆ ಬಂದು ಬಿಡು ನಾಗಣ್ಣಾ.. ನಿನ್ನ ನೋಡಿ ಬಹಳ ದಿನ ಆಯ್ತು ಮಾರಾಯಾ. ಬಸ್ಸು, ಟ್ರೇನ್ ಇಲ್ಲವೇ ವಿಮಾನವಾದರೂ ಹತ್ತಿ ಬಂದುಬಿಡು, ಇಲ್ಲಾದರೆ ನಿಂಗೆ ಹೋಳಿಗೆ, ಹಾಲು ಎಲ್ಲ ಸಿಗುತ್ತದೆ, ಅಲ್ಲಿ ಒಬ್ನೇ ಹೇಗೆ ಹಬ್ಬ ಮಾಡ್ತೀಯಾ? ಇಲ್ಲಿ ಎಲ್ರೂ ಇದ್ದಾರೆ, ಬರ್ತಿಯಾ ತಾನೆ? ಅಂತ ಮೆಸೇಜು. ಅದನ್ನು ನೋಡಿದ ಕೂಡಲೇ ನಾಗಣ್ಣ ಊರಿನತ್ತ ಮುಖ ಮಾಡಿದ. ಬಸ್ಸು, ಟ್ರೇನ್ ಆದ್ರೆ ಲೇಟಾಗುತ್ತೆ, ವಿಮಾನದ ಮೂಲಕವೇ ಹೋದರಾಯ್ತು ಅಂದುಕೊಂಡವನು ಕೊಲ್ಕತ್ತಾದ ಡಂ ಡಂ ವಿಮಾನ ನಿಲ್ದಾಣಕ್ಕೆ ಹೋಗಿ ಇನ್ನೇನು ವಿಮಾನ ಹತ್ತಬೇಕು ಅನ್ನುವಷ್ಟರಲ್ಲಿ ಅದೆಲ್ಲಿದ್ದನೋ ಹಾಳಾದ ಸೆಕ್ಯುರಿಟಿಯವನು, ನಾಗಣ್ಣನನ್ನು ನೋಡೇ ಬಿಟ್ಟ. ಸೆಕ್ಯುರಿಟಿ ಮತ್ತು ಉಳಿದ ಜನರಿಂದ ತಪ್ಪಿಸಿಕೊಂಡು ವಿಮಾನದೊಳಗೆ ನುಸುಳುವ ಭಗೀರಥ ಪ್ರಯತ್ನ ನಾಗಣ್ಣ ಮಾಡಿದನಾದರೂ ಅವನಿಗದು ಸಾಧ್ಯವಾಗದೇ ಹೋಯಿತು.
ಇದೆಲ್ಲ ಕತೆ ಕಟ್ಟಿ ಹೇಳಿದ್ದು ಮಾರಾಯ್ರೇ.. ಅಸಲಿಗೆ ಮೊನ್ನೆ ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ಒಂದು ನಾಗರಹಾವು ಅದ್ಹೇಗೋ ನುಸುಳಿ ಬಿಟ್ಟಿತ್ತು. ಕೊಲ್ಕತಾದಿಂದ ಮುಂಬೈಗೆ ಹಾರಲಿದ್ದ ವಿಮಾನದಲ್ಲಿ ಅದು ಕಾಣಿಸಿಕೊಂಡಿತ್ತು. ಹಾವೆಂದರೆ ಕೇಳಬೇಕೇ ಅಲ್ಲಿದ್ದ ಜನ ಹೌಹಾರಿದರು. ಕೆಲವರು ಭಯದಿಂದ ತಮಗೆ ಕಾಣಿಸಿದ ದಿಕ್ಕಿನಲ್ಲಿ ಓಡಿದರು. ಬೇರೆ ಕೆಲವರು ಸುರಕ್ಷಿತ ಸ್ಥಳದಲ್ಲಿ ಅವಿತುಕೊಳ್ಳುವ ಪ್ರಯತ್ನ ಮಾಡಿದರು. ಸೆಕ್ಯುರಿಟಿಯವರು ದಿಕ್ಕು ತೋಚದೆ ಅತ್ತಿಂದಿತ್ತ ಓಡಾಡಿದರು.
ಕೊನೆಗೆ ಉರಗ ತಜ್ಞರೊಬ್ಬರು ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸಿದರು. ಆದರೆ ಸ್ವಲ್ಪ ಸಮಯದವರೆಗೆ ನಾಗಣ್ಣ ಏರ್ಪೋರ್ಟ್ನಲ್ಲಿ ಕೋಲಾಹಲ ಉಂಟಾಗುವಂತೆ ಮಾಡಿದ್ದು ಮಾತ್ರ ನಿಜ.
ಇದನ್ನೂ ಓದಿ: Viral Video: ಮದುವೆಯಲ್ಲಿ ವರನ ಸ್ನೇಹಿತನ ನಾಗಿಣಿ ಡಾನ್ಸ್! ವಿಡಿಯೋ ಗಮ್ಮತ್ತಾಗಿದೆ ನೀವೂ ನೋಡಿ