ನೂತನ ನೋಯ್ಡಾ ವಿಮಾನ ನಿಲ್ದಾಣದಲ್ಲಿ ಯಶಸ್ವೀಯಾಗಿ ಲ್ಯಾಂಡ್ ಆದ ಮೊದಲ ವಿಮಾನ, ಮುಂದಿನ ವರ್ಷದಿಂದ ಕಾರ್ಯಾಚರಣೆ ಆರಂಭ
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಓ ಕ್ರಿಸ್ಟಾಫ್ ಶೆಲ್ಮ್ಯಾನ್ ನಾಗರಿಕ ವಿಮಾನಯಾನ ಸಚಿವಾಲಯ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನವದೆಹಲಿ: ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮೊದಲ ವಿಮಾನಯಾನ ಪರೀಕ್ಷಣೆ ಯಶಸ್ವೀಯಾಗಿ ನಡೆದಿದ್ದು ಮುಂದಿನ ವರ್ಷದಿಂದ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಹಾದಿ ಸುಗಮವಾದಂತಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಇಂಡಿಗೋ ಸಂಸ್ಥೆಯ ವಿಮಾನವೊಂದು ಅವಶ್ಯವಿರುವ ಭದ್ರತಾ ತಪಾಸಣೆಗಳ ನಂತರ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಜಲವಂದನೆಯೊಂದಿಗೆ ವಿಮಾನವನ್ನು ಸ್ವಾಗತಿಸಲಾಯಿತು.
ನೋಯ್ಡಾ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಗೌತಮ ಬುದ್ಧನಗರ ಜೆವರ್ ಎಂಬಲ್ಲಿ ನಿರ್ಮಿಸಲಾಗಿದೆ ಮತ್ತು ಮುಂದಿನ ವರ್ಷದ ಏಪ್ರಿಲ್ ನಿಂದ ವಿಮಾನಯಾನ ಶುರುಮಾಡುವ ನಿರೀಕ್ಷೆಯಿದೆ. ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದಲ್ಲಿ(NCR) ಐಜಿಐ ಏಪೋರ್ಟ್ ನಂತರ ಇದು ಎರಡನೇ ಪ್ರಮುಖ ವಿಮಾನ ನಿಲ್ದಾಣ ಎನಿಸಿಕೊಳ್ಳಲಿದೆ.
ಹರ್ಷ ವ್ಯಕ್ತಪಡಿಸಿದ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ
‘ಇದೊಂದು ಪ್ರತಿಷ್ಠಿತ ಪ್ರಾಜೆಕ್ಟ್ ಅಗಿದ್ದು, ಇವತ್ತು ವಿಮಾನವೊಂದು ಲ್ಯಾಂಡ್ ಆಗಿದ್ದು ಮಹತ್ತರ ಸಾಧನೆಯಾಗಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದರು.
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಓ ಕ್ರಿಸ್ಟಾಫ್ ಶೆಲ್ಮ್ಯಾನ್ ನಾಗರಿಕ ವಿಮಾನಯಾನ ಸಚಿವಾಲಯ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
‘ನಾವೆಲ್ಲ ಒಟ್ಟಾಗಿ ದಾಖಲೆಯ ಸಮಯದಲ್ಲಿ ಕೆಲಸವನ್ನು ಪೂರ್ತಿಗೊಳಿಸಿದ್ದೇವೆ’ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.
ನವೆಂಬರ್ 2021 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೇವರ್ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.
ಈ ವಿಮಾನ ನಿಲ್ದಾಣವನ್ನು ಸ್ವಿಸ್ ಸಂಸ್ಥೆ ಜ್ಯೂರಿಚ್ ಏರ್‌ಪೋರ್ಟ್ ಇಂಟರ್‌ನ್ಯಾಶನಲ್ ಎಜಿಯ ಅಂಗಸಂಸ್ಥೆಯಾಗಿರುವ ಯಮುನಾ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್, ಉತ್ತರ ಪ್ರದೇಶ ಸರ್ಕಾರದ ಪರವಾಗಿ ಅನುಷ್ಠಾನಗೊಳಿಸುವ ಏಜೆನ್ಸಿಯಾದ ನೋಯ್ಡಾ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ನಿರ್ಮಿಸಿದೆ.
ನೋಯ್ಡಾ ವಿಮಾನ ನಿಲ್ದಾಣ ಯೋಜನೆಯು 1,334 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿದ್ದು, ಒಂದು ಅಂದಾಜಿನ ಪ್ರಕಾರ ಮೊದಲ ಹಂತದಲ್ಲಿ ಪ್ರತಿವರ್ಷ 1.2 ಕೋಟಿ ಪ್ರಯಾಣಿಕರು ಇದನ್ನು ಬಳಸುವ ನಿರೀಕ್ಷೆ ಇದೆ. ಈ ದಶಕದ ಅಂತ್ಯದವರೆಗೆ ಈ ಸಂಖ್ಯೆಯು 3 ಕೋಟಿಗೆ ಹೆಚ್ಚಲಿದ್ದು ನಂತರದ ವರ್ಷಗಳಲ್ಲಿ 7 ಕೋಟಿಯನ್ನು ತಲುಪಲಿದೆ.
ಆರಂಭಿಕ ಹಂತದಲ್ಲಿ ಒಂದು ರನ್ವೇ ಮಾತ್ರ
ಆರಂಭಿಕ ಹಂತದಲ್ಲಿ ಒಂದು ರನ್ವೇಯನ್ನು ಉಪಯೋಗಿಲಾಗುತ್ತದೆ ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಗೊಂಡಾಗ ಇಲ್ಲಿನ ಟರ್ಮಿನಲ್ 10 ಏರೋಬ್ರಿಜ್ ಮತ್ತು 3 ಬಸ್ ಗೇಟ್ ಗಳನ್ನು ಹೊಂದಿರಲಿದೆ.
ಅಂತಿಮವಾಗಿ ಎರಡು ಕಾರ್ಯಾಚರಣೆಯ ರನ್‌ವೇಗಳು ನಿಲ್ದಾಣಕ್ಕೆ ಲಭ್ಯವಾಗಲಿವೆ ಮತ್ತು ನಿಲ್ದಾಣವು ಆರಂಭದಲ್ಲಿ ವಿಮಾನಗಳಿಗಾಗಿ 28 ಸ್ಥಳಗಳನ್ನು ಏಪ್ರನ್ ಪ್ರದೇಶದಲ್ಲಿ ಹೊಂದಿದ್ದರೆ, ವಿಮಾನಗಳು ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಇದು 200 ಕ್ಕೆ ವಿಸ್ತರಿಸಲಿದೆ.
ಈ ವಿಮಾನ ನಿಲ್ದಾಣವು ಸಿಗ್ನಲ್-ಮುಕ್ತ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ಗ್ರೇಟರ್ ನೋಯ್ಡಾ, ನೋಯ್ಡಾ ಮತ್ತು ದೆಹಲಿಗೆ ಸಂಪರ್ಕ ಹೊಂದಿದೆ.
ಆಗ್ರಾದ ತಾಜ್ ಮಹಲ್ ಮತ್ತು ಹಿಂದೂ ಪುಣ್ಯಕ್ಷೇತ್ರಗಳಾಗಿರುವ ಚಾರ್ಧಾಮ್ ಯಾತ್ರೆ, ಕುಂಭಮೇಳ, ಮಥುರಾ, ಬೃಂದಾವನ್ ಹಾಗೂ ಬೌದ್ಧ ಧರ್ಮದ ಸರ್ಕ್ಯುಟ್- ಸ್ರಾವಸ್ತಿ, ಕಪಿಲವಾಸ್ತು ಮತ್ತು ಖುಷಿನಗರ ಸೇರಿದಂತೆ, ಉತ್ತರಭಾರತದ ಪ್ರವಾಸಿ ಕೇಂದ್ರಗಳಿಗೆ ಹೆಬ್ಬಾಗಿಲು ಆಗುವ ಹಾಗೆ ಈ ವಿಮಾನ ನಿಲ್ದಾಣವನ್ನು ಯೋಜಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Viral: ಕನ್ನಡಲ್ಲಿ ಪ್ರಕಟಣೆ ನೀಡಿದ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ ಲುಫ್ತಾನ್ಸ ವಿಮಾನ