ಅವರ ಬದಲು ದೇವರು ನನ್ನನ್ನು ಕರೆದುಕೊಳ್ಳಬಾರದಿತ್ತೇ ಅಂತ ಅಪ್ಪು ಸಮಾಧಿ ಬಳಿ ಕಣ್ಣಿರಿಟ್ಟ ಅಭಿಮಾನಿ

ಅವರ ಬದಲು ದೇವರು ನನ್ನನ್ನು ಕರೆದುಕೊಳ್ಳಬಾರದಿತ್ತೇ ಅಂತ ಅಪ್ಪು ಸಮಾಧಿ ಬಳಿ ಕಣ್ಣಿರಿಟ್ಟ ಅಭಿಮಾನಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 16, 2021 | 10:00 PM

ಅಪ್ಪು ಮರಣದ ನಂತರ ತನಗೆ ಪ್ರಪಂಚವೇ ಬೇಡ ಅನಿಸಿಬಿಟ್ಟಿದೆ, ದೇವರು ಅವರನ್ನು ತೆಗೆದುಕೊಳ್ಳುವ ಬದಲು ತನ್ನನ್ನು ತೆಗೆದುಕೊಳ್ಳಬೇಕಿತ್ತು ಅಂತ ಹೇಳುತ್ತಾ ಪ್ರಕಾಶ ಗದ್ಗದಿತರಾಗುತ್ತಾರೆ.

ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಜನಸಾಗರ ಹರಿದು ಬರುವುದು ನಿಲ್ಲಲ್ಲ. ಪ್ರತಿದಿನ ಕಂಠೀರವ ಸ್ಟುಡಿಯೋಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಹಿರಿಯ ನಟ ಶ್ರೀನಿವಾಸಮೂರ್ತಿ ಅವರು, ಪುನೀತ್ ಅವರು ತಮ್ಮ ತಂದೆಗಿಂತ ಹೆಚ್ಚು ಜನಪ್ರಿಯರಾಗಿದ್ದರು ಅಂತ ಹೇಳಿದ್ದು ಅತಿಶಯೋಕ್ತಿ ಅಲ್ಲ. ಅಪ್ಪು ಬದುಕಿದ್ದಾಗ ಅವರು ಇಷ್ಟು ಜನಪ್ರಿಯರು, ಜನ ಅವರನ್ನು ಇಷ್ಟೆಲ್ಲ ಆರಾಧಿಸುತ್ತಾರೆ ಅಂತ ಯಾರಿಗೂ ಕಲ್ಪನೆ ಇರಲಿಲ್ಲ. ಮಂಗಳವಾರದಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದವರಲ್ಲಿ ಈ ವಿಡಿಯೋನಲ್ಲಿ ಕಾಣುತ್ತಿರುವ ಚನ್ನರಾಯಪಟ್ಟಣ ಮರವೂರಿನ ಪ್ರಕಾಶ ಸಹ ಒಬ್ಬರು.

ಪ್ರಕಾಶ ಅವರಿಗೆ ಪುನೀತ್ ಬಗ್ಗೆ ಇದ್ದ ಪ್ರೀತಿ, ಅಭಿಮಾನ ಎಂಥದ್ದು ಅಂತ ಅವರ ಮಾತುಗಳಲ್ಲೇ ಕೇಳಿ. ಸಿದ್ಧಗಂಗಾ ಶ್ರೀಗಳ ನಂತರ ಅಪ್ಪು ಅವರೇ ತನ್ನ ಆರಾಧ್ಯ ದೈವ ಎಂದು ಅವರು ಹೇಳುತ್ತಾರೆ. ಅಪ್ಪು ಸಮಾಧಿ ಇರುವ ಕಂಠೀರವ ಸ್ಟುಡಿಯೋ ಅಪ್ಪು ದೇವಾಲಯವಾಗಿ ಮಾರ್ಪಪಟ್ಟಿದೆ ಎಂದು ಅವರುಹೇಳುತ್ತಾರೆ. ಅವರ ಮರಣದ ನಂತರ ತನಗೆ ಪ್ರಪಂಚವೇ ಬೇಡ ಅನಿಸಿಬಿಟ್ಟಿದೆ, ದೇವರು ಅವರನ್ನು ತೆಗೆದುಕೊಳ್ಳುವ ಬದಲು ತನ್ನನ್ನು ತೆಗೆದುಕೊಳ್ಳಬೇಕಿತ್ತು ಅಂತ ಹೇಳುತ್ತಾ ಅವರು ಗದ್ಗದಿತರಾಗುತ್ತಾರೆ.

ಅಪ್ಪು ಅವರ ಎಲ್ಲ ಸಿನಿಮಾಗಳನ್ನು ಪ್ರಕಾಶ ನೋಡಿದ್ದಾರಂತೆ. ಅವರ ನಟನೆ, ಸ್ಟೈಲ್, ನಗು, ಡ್ಯಾನ್ಸ್ ಮತ್ತು ಫೈಟ್ ಎಲ್ಲವೂ ಅವರಿಗೆ ಇಷ್ಟ. ಅವರು ಬಹಳ ದೊಡ್ಡ ಗುಣವಂತ, ಮೈಸೂರು ಮತ್ತು ಧರ್ಮಸ್ಥಳಕ್ಕೆ ಅವರು ಬಂದಿದ್ದಾಗ ಪ್ರಕಾಶ ನೋಡಲು ಹೋಗಿದ್ದರಂತೆ. ಅವರನ್ನೊಮ್ಮೆ ವೈಯಕ್ತಿಕವಾಗಿ ಭೇಟಿಯಾಗಬೇಕೆನ್ನುವ ತನ್ನಾಸೆಯನ್ನು ದೇವರು ಈಡೇರಿಸಲಿಲ್ಲ ಅಂತ ಅವರು ಖೇದದಿಂದ ಹೇಳುತ್ತಾರೆ.

ಅಪ್ಪು ಮರಣ ಹೊಂದಿದ ವಿಷಯವನ್ನು ಅವರು ಟಿವಿ9 ನಲ್ಲಿ ನೋಡಿ ತಿಳಿದುಕೊಂಡರಂತೆ. ಅಂತಿಮ ದರ್ಶನ ಪಡೆಯಲು ಅದೇ ದಿನ ಬೆಂಗಳೂರಿಗೆ ಆಗಮಿಸಬೇಕು ಅಂದುಕೊಂಡಿದ್ದರಂತೆ. ಆದರೆ ಅವರ ಮಗ, ಜನ ಜಾಸ್ತಿ ಇರ್ತಾರೆ, ಅವರ ದರ್ಶನ ಪಡೆಯುವುದು ಸಾಧ್ಯವಾಗಲಾರದು ಅಂತ ಹೇಳಿದ್ದರಿಂದ ಹಿಂದೆ ಸರಿದರಂತೆ.

ಅಪ್ಪುಗೆ ಎಂತೆಂಥ ಅಭಿಮಾನಿಗಳು!!

ಇದನ್ನೂ ಓದಿ:   ಪುನೀತ್ ರಾಜ್​ಕುಮಾರ್ ಪೋಟೋಗೆ ಮುತ್ತಿಟ್ಟ ಒಂದು ವರ್ಷದ ಮಗು; ವಿಡಿಯೋ ವೈರಲ್